Read - < 1 minuteಮುಂಬೈ, ಅ.4: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಮೊಟ್ಟ ಮೊದಲ ಆರ್ಥಿಕ ನೀತಿಯನ್ನು ಪ್ರಕಟಿಸಿರುವ ಊರ್ಜಿತ್ ಪಟೇಲ್, ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ, ಶೇ.6.25ಕ್ಕೆ ನಿಗದಿಪಡಿಸಿದ್ದಾರೆ.
ಈ ಕುರಿತಂತೆ ಪಟೇಲ್ ಇಂದು ಮಾಹಿತಿ ನೀಡಿದರು. ರಿವರ್ಸ್ ರೆಪೊ ದರವನ್ನು ದ್ರವ್ಯತೆ ಹೊಂದಾಣಿಕೆ ಸೌಲಭ್ಯ(ಎಲ್‌ಎಎಫ್) ಅಡಿ ಶೇಕಡಾ 5.75ಕ್ಕೆ ನಿಗದಿಪಡಿಸಿದೆ. ಕನಿಷ್ಠ ಸ್ಥಿರ ಸೌಲಭ್ಯ(ಎಮ್‌ಎಸ್‌ಎಫ್) ದರ ಕೂಡ ಶೇಕಡಾ 6.75 ಆಗಿದೆ. ಇದು 2010ರ ನಂತರ ರೆಪೊ ದರ ಅತ್ಯಂತ ಕನಿಷ್ಠವಾಗಿದೆ.
ರೆಪೋದರವನ್ನು ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಹಾಗೂ ವಾಹನ ಸಾಲದ ಮೇಲಿನ ಬಡ್ಡಿ ಅಗ್ಗವಾಗುವ ಸಾಧ್ಯತೆಯಗಳಿವೆ.
ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ವಿಧಿಸುವ ಬಡ್ಡಿಯೇ ರೆಪೊ ದರ. ಈಗ ಆರ್‌ಬಿಐ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿರುವುದರಿಂದ ಬ್ಯಾಂಕುಗಳಿಗೆ ಆರ್‌ಬಿಐನಿಂದ ಸ್ವಲ್ಪ ಅಗ್ಗದ ದರದಲ್ಲಿ ಹಣಕಾಸು ಪೂರೈಕೆಯಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಅಂದರೆ ಜನರಿಗೆ ಕಡಿಮೆ ಬಡ್ಡಿಗೆ ಗೃಹ, ವಾಹನ, ಕಾರ್ಪೊರೇಟ್ ಸಾಲಗಳು ದೊರಕುತ್ತವೆ.
ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಮಾಡಿರುವ ಈ ಕಡಿತದ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಗಳಿವೆ. ರಿಸರ್ವ್ ಬ್ಯಾಂಕಿನ ಇತಿಹಾಸದಲ್ಲಿ ಈ ದಿನ ರೆಪೋದರ ಕಡಿತದ ನಿರ್ಧಾರ ಹೊಸ ಯುಗವನ್ನು ಆರಂಭಿಸಲಿದೆ. ಕಾರಣ ಇದೇ ಮೊತ್ತ ಮೊದಲ ಬಾರಿಗೆ ನೀತಿ ನಿರ್ಣಯವನ್ನು ಸಮಿತಿ ಕೈಗೊಂಡಿದೆ. ಈ ಹಿಂದೆ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಕೈಗೊಳ್ಳುತ್ತಿದ್ದರು. ರಘುರಾಮ ರಾಜನ್ ಅವರ ಸ್ಥಾನಕ್ಕೆ ನೇಮಕಗೊಂಡ ಗವರ್ನರ್ ಊರ್ಜಿತ್ ಪಟೇಲ್ ಅವರ ಕೈಕೆಳಗಿನ ಸಮಿತಿಯ ಮೊತ್ತ ಮೊದಲ ಸಭೆ ಇದಾಗಿದ್ದು, ಡಾ. ಪಟೇಲ್, ಇಬ್ಬರು ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಸರ್ಕಾರದಿಂದ ನೇಮಕಗೊಂಡ ಮೂವರು ಸದಸ್ಯರು ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ರೆಪೋದರವನ್ನು ಕಡಿತಗೊಳಿಸಿದ್ದರಿಂದ ಈಗ ರೆಪೋ ದರ 6 ವರ್ಷಗಳ ಅವಧಿಯಲ್ಲೇ ಅತ್ಯಂತ ಕೆಳಕ್ಕೆ ಇಳಿಯಲಿದೆ. ಪರಿಣಾಮವಾಗಿ ಇಎಂಐಗಳು ಕಡಿಮೆಯಾಗಲಿವೆ. 2016-17ರ ಸಾಲಿನಲ್ಲಿ ಗ್ರಾಹಕರ ಹಣದುಬ್ಬರ ಸೂಚ್ಯಂಕವನ್ನು ಶೇಕಡಾ 5ಕ್ಕೆ ಇಳಿಸಬೇಕೆಂಬ ಗುರಿಗೆ ಅನುಗುಣವಾಗಿ ಎಂಪಿಸಿ ಈ ನಿಧರ್ಾರವನ್ನು ಕೈಗೊಂಡಿದೆ. ಹಣದುಬ್ಬರ ಇಳಿಕೆಯಿಂದ ಆರ್ಥಿಕ ಬೆಳವಣಿಗೆಗೆ ಇಂಬು ಸಿಗಲಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿದೆ.
Discussion about this post