Read - < 1 minute
ನವದೆಹಲಿ:ಸೆ-25:ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೆ.26ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದು, ವಿಶ್ವಸಂಸ್ಥೆಯಲ್ಲಿ ಉಗ್ರ ಬುರ್ಹಾನ್ ವನಿ ವಿಚಾರ ಪ್ರಸ್ತಾಪಿಸಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ತೀಕ್ಷ್ಣ ಪ್ರತ್ಯುತ್ತರ ನೀಡುವ ಸಾಧ್ಯತೆಯಿದೆ.
ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾಧಿವೇಶನಕ್ಕೆ ಭಾರತದ ನಿಯೋಗದ ನೇತೃತ್ವ ವಹಿಸಿರುವ ಸುಷ್ಮಾ ಸ್ವರಾಜ್ ಈಗಾಗಲೇ ನ್ಯೂಯಾರ್ಕ ನಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಕಾಶ್ಮೀರ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸಿ ಈಗಾಗಲೇ ಭಾರಿ ಮುಖಭಂಗಕ್ಕೆ ಒಳಗಾಗಿರುವ ಪಾಕ್ ಪ್ರಧಾನಿ ಮೇಲೆ ಮತ್ತೊಮ್ಮ ವಾಕ್ ಪ್ರಹಾರ ನಡೆಸಲು ಸುಷ್ಮಾ ಅಂತಾರಾಷ್ಟ್ರೀಯ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಭಾಷಣದಲ್ಲಿ ಸುಷ್ಮಾ ಪ್ರಮುಖವಾಗಿ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯನ್ನೇ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಜಮ್ಮು-ಕಾಶ್ಮೀರದ ಉರಿ ಉಗ್ರರ ದಾಳಿಯಲ್ಲಿ 18 ಯೋಧರನ್ನು ಹತ್ಯೆಗೈದ ವಿಷಯವನ್ನೂ ಸುಷ್ಮಾ ಪ್ರಸ್ತಾಪಿಸಲಿದ್ದಾರೆ. ಈ ದಾಳಿಯಲ್ಲಿ ಪಾಕ್ ಕೈವಾಡವನ್ನು ಸಾಬೀತುಪಡಿಸುವ ಅಂಶಗಳನ್ನು ಸಭೆಯ ಮುಂದಿಡುವ ಮೂಲಕ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿ ಮಾಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಒಮ್ಮತದಿಂದ ಹೋರಾಡುವ ಅಗತ್ಯದ ಕುರಿತು ಸಮಗ್ರ ಅಂತಾರಾಷ್ಟ್ರೀಯ ತಡೆ ಒಪ್ಪಂದ (ಸಿಸಿಐಟಿ) ಜಾರಿ ತರುವಂತೆ ಅವರು ವಿಶ್ವಸಂಸ್ಥೆಯನ್ನು ಒತ್ತಾಯಿಸಲಿದ್ದಾರೆ. ಭಯೋತ್ಪಾದಕರನ್ನು ಉತ್ತೇಜಿಸಲು ಹಣ ನೀಡುವ ರಾಷ್ಟ್ರಗಳನ್ನು ಕಾನೂನಿನ ಚೌಕಟ್ಟಿನಡಿ ತರಲು ರೂಪಿಸಿದ್ದ ನೀತಿಇದಾಗಿದ್ದು, 1996ರಲ್ಲೇ ಭಾರತ ಸಿಸಿಐಟಿ ಒಪ್ಪಂದ ರೂಪಿಸಿತ್ತು.
Discussion about this post