Read - < 1 minute
ನವದೆಹಲಿ, ಸೆ.7: ಭಾರತೀಯ ಮುಸ್ಲಿಮರನ್ನು ಮತಾಂಧರ ಕಪಿಮುಷ್ಟಿಯಿಂದ ರಕ್ಷಿಸುವುದಕ್ಕಾಗಿ ಇಸ್ಲಾಮ್ಫೋಬಿಯಾ ಪ್ರಚಾರನಿರತ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡನ್ನು ವಿಸರ್ಜಿಸುವಂತೆ ಖ್ಯಾತ ಮಹಿಳಾ ಹೋರಾಟಗಾರ್ತಿ ಹಾಗೂ ಹಿರಿಯ ನ್ಯಾಯವಾದಿ ಫರ್ಹಾ ಫಯಾಜ್ ಸುಪ್ರೀಂಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.
ಶರಿಯಾ ನ್ಯಾಯಾಲಯಗಳು ಎಂದೂ ಈ ದೇಶದ ಪರವಾಗಿ ಮಾತನಾಡಿದ್ದಿಲ್ಲ ಬದಲಿಗೆ ಇಸ್ಲಾಮ್ಫೋಬಿಯಾವನ್ನಷ್ಟೇ ಸೃಷ್ಟಿಸಿವೆ ಎಂದು ಫಯಾಜ್ ಗಂಭೀರ ಆರೋಪ ಮಾಡಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್ಬಿ) ತ್ರಿ-ತಲಾಖ್ ಪದ್ಧತಿಯನ್ನು ಸಮರ್ಥಿಸಿಕೊಂಡ ಬೆನ್ನಿಗೇ , ಈ ಪುರುಷರು ತಮ್ಮ ಭಾವುಕತೆಯನ್ನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಇಸ್ಲಾಮ್ಫೋಬಿಯಾದ ಪ್ರಚಾರಲ್ಲಿ ತೊಡಗಿರುವ ಈ ಬೋರ್ಡನ್ನು ವಿಸರ್ಜಿಸುವ ಮೂಲಕ ಮುಸ್ಲಿಮರನ್ನು ಮೂಲಭೂತವಾದ, ಮತಾಂಧತೆಯಿಂದ ರಕ್ಷಿಸಬೇಕೆಂದು ಫರ್ಹಾ ಫಯಾಜ್ ಅಫಿದವಿತ್ ಒಂದರ ಮೂಲಕ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಂತಹ ಸಂಸ್ಥೆಗಳಿಂದಾಗಿ ಮುಸ್ಲಿಮರು ದೇಶಕ್ಕಿಂತ ತಮ್ಮ ಮತವೇ ಮುಖ್ಯ ಎಂಬಂತಹ ತಪ್ಪು ತಿಳುವಳಿಕೆ ತಾಳುವಂತಾಗುತ್ತದೆ. ಇಂತಹ ನಿಲುವು ಮುಸ್ಲಿಮರನ್ನು ಯಾವಾಗಲೂ ಬಿಕ್ಕಟ್ಟಿಗೆ ತಳ್ಳುತ್ತದೆ.ಇದಕ್ಕಾಗಿ ಶರಿಯಾವನ್ನು ನಿರ್ಬಂಧಿಸಬೇಕು ಎಂದು ಅವರು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ.
ಈ ಮಂಡಳಿಯೆಂದೂ ಮಾತೃಭೂಮಿ ಅಥವಾ ನಮ್ಮ ದೇಶ ಹಿತದ ಪರವಾಗಿ ನಿಲುವು ತಾಳಿದ್ದಿಲ್ಲ.ಅವರು ಜನರಲ್ಲಿ ಯಾವತ್ತೂ ಇಸ್ಲಾಮ್ಫೋಬಿಯಾವನ್ನು ಸೃಷ್ಟಿಸುತ್ತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ದಾರುಲ್ ಉಲೂಮ್ ದಿಯೋಬಂದ್ ಎಂದೂ ನಮ್ಮ ದೇಶದ ಸರಕಾರದಿಂದ ಹಣಕಾಸು ನೆರವು ಪಡೆಯದೆ, ವಿಶ್ವದ ಎಲ್ಲೆಡೆಯಿಂದ ಮಿಲಿಯಾಂತರ ರೂ.ಗಳನ್ನು ಪಡೆಯುತ್ತಿರುತ್ತದೆ ಎಂದು ಫರ್ಹಾ ತಮ್ಮ ಅಫಿಟವಿಟ್ ನಲ್ಲಿ ಬೊಟ್ಟು ಮಾಡಿದ್ದಾರೆ.
ಈ ದೇಶದಲ್ಲಿನ ಕಾನೂನು ಮತ್ತು ನ್ಯಾಯ ವ್ಯವಸ್ಥೆ ಅತ್ಯುತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಿದೆ. ಇಲ್ಲಿ ನಮ್ಮ ಸಂವಿಧಾನಬದ್ಧ ನ್ಯಾಯಾಂಗ ವ್ಯವಸ್ಥೆಗೆ ಸಮಾನಾಂತರವಾಗಿ ಮತದ ಹೆಸರಿನಲ್ಲಿ ಇನ್ನೊಂದು ವ್ಯವಸ್ಥೆ ಇರುವುದು ಸರಿಯಲ್ಲ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಮಾಡುವ ಅಪಚಾರ. ಮುಸ್ಲಿಂ ಮತೀಯ ಪಂಡಿತರು, ಮುಸ್ಲಿಮರನ್ನು ತಪ್ಪುದಾರಿಗೆಳೆದು ಅವರಲ್ಲಿ ಮತಾಂಧತೆ ಮತ್ತು ತೀವ್ರವಾದದತ್ತ ತಳ್ಳುತ್ತಾರೆ ಎಂದು ಫರ್ಹಾ ದೂರಿದ್ದಾರೆ.
ಮುಖ್ಯ ನ್ಯಾಯಾಧೀಶ ನ್ಯಾ.ಟಿ.ಎಸ್. ಠಾಕೂರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ತ್ರಿ-ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ಸಂಕಷ್ಟಗಳ ಕುರಿತಂತೆ ಸಲ್ಲಿಸಲ್ಪಟ್ಟಿರುವ ಅರ್ಜಿಗಳ ಗುಚ್ಛದ ಬಗ್ಗೆ ಕೇಂದ್ರಕ್ಕೆ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
Discussion about this post