ಚೆನ್ನೈ/ಬೆಂಗಳೂರು: ಅ:28: ಸಾರ್ವಜನಿಕರ ವಿರೋಧದ ನಡುವೆಯೂ ನವೆಂಬರ್ 1 ರಿಂದ ಬೆಂಗಳೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದ್ದ ಬಹು ನಿರೀಕ್ಷಿತ ಉಕ್ಕಿನ ಸೇತುವೆ (ಸ್ಟೀಲ್ ಬ್ರಿಡ್ಜ್) ನಿರ್ಮಾಣಕ್ಕೆ ಇಲ್ಲಿನ ರಾಷ್ಟ್ರೀಯ ಹಸಿರು ನ್ಯಾಯ ಪೀಠ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.
ಇದರಿಂದ ರಾಜ್ಯ ಸರ್ಕಾರದ ಉದ್ದೇಶಿತ ಯೋಜನೆಗೆ ಭಾರೀ ಹಿನ್ನಡೆಯಾಗಿದೆ.ಪರಿಸರ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುವ ಈ ಯೋಜನೆಯನ್ನು ತಡೆಹಿಡಿಯಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ
ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಹಸಿರು ಪೀಠದ ತ್ರಿಸದಸ್ಯ ನ್ಯಾಯಮೂರ್ತ ಗಳು ಕರ್ನಾಟಕ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಗೆ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿ ಅರ್ಜಿ ಮುಂದೂಡಿದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದ ಫ್ಲೈಓವರ್ವರೆಗೆ ಸುಮಾರು ಆರೂವರೆ ಕಿ.ಮೀ. ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ 800 ಮರಗಳ ಮಾರಣಹೋಮ ನಡೆಯುವುದರ ಜೊತೆಗೆ ಪರಿಸರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗುತ್ತದೆ.
ಅಲ್ಲದೆ ಉಕ್ಕಿನ ಸೇತುವೆ ಹಾದುಹೋಗುವ ಕೆಲವು ಅತಿ ಸೂಕ್ಷ್ಮ ಪ್ರದೇಶಗಳಿವೆ. ಇಂದಿರಾಗಾಂಧಿ ಕಾರಂಜಿ, ನೆಹರೂ ತಾರಾಲಯ, ಅತ್ಯಮೂಲ್ಯವಾದ ಪ್ರಾಣಿ ಸಂಕುಲ ಸೇರಿದಂತೆ ವಿವಿಧ ರೀತಿಯ ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆಯಾಗುವುದರಿಂದ ಈ ಯೋಜನೆಯನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಅರ್ಜಿಯಲ್ಲಿ ದೂರುದಾರರು ಮನವಿ ಮಾಡಿದ್ದರು.
ಪ್ರಾರಂಭದಲ್ಲಿ ಈ ಸೇತುವೆ ನಿರ್ಮಾಣಕ್ಕೆ 1300 ಕೋಟಿ ಯೋಜನಾ ವೆಚ್ಚ ನಿಗದಿಪಡಿಸಿದ್ದ ರಾಜ್ಯಸರ್ಕಾರ ಇದ್ದಕ್ಕಿದ್ದಂತೆ ಸಚಿವ ಸಂಪುಟ ಸಭೆಯಲ್ಲಿ 600 ಕೋಟಿ ಏರಿಕೆ ಮಾಡಿದ್ದು, ಒಟ್ಟು ಯೋಜನಾ ವೆಚ್ಚಕ್ಕೆ 1900 ಕೋಟಿ ರೂ. ವೆಚ್ಚ ಮಾಡಲು ಮುಂದಾಗಿದೆ.
ಕೇವಲ ಆರೂವರೆ ಕಿ.ಮೀ. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡಲು ಅನೇಕ ಪರ್ಯಾಯ ಮಾರ್ಗಗಳಿವೆ.
ಆದರೆ ಸರ್ಕಾರ ಯಾವ ಕಾರಣಕ್ಕಾಗಿ ಆತುರದಲ್ಲಿ ಯೋಜನೆ ಪ್ರಾರಂಭಿಸಲು ಮುಂದಾಗಿದೆ ಎಂಬುದು ತಿಳಿಯುತ್ತಿಲ್ಲ. ಈಗಾಗಲೇ ಈ ಯೋಜನೆ ವಿರುದ್ಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಪರಿಸರ ಪ್ರೇಮಿಗಳು, ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇದ್ಯಾವುದನ್ನೂ ಲೆಕ್ಕಿಸದೆ ಸಾರ್ವಜನಿಕರ ವಿರೋಧದ ನಡುವೆಯೂ ನ.1 ರಂದು ಕಾಮಗಾರಿಗೆ ಪ್ರಾರಂಭಿಸಲು ಮುಂದಾಗಿದೆ. ಎಲ್ ಅಂಡ್ ಟಿ ಮತ್ತು ಅದರ ಸಹ ಸಂಸ್ಥೆಯಾದ ನಾಗಾರ್ಜುನ ಕನ್ಸ್ಸ್ಟ್ರಕ್ಷನ್ಗೆ ಗುತ್ತಿಗೆ ನೀಡಲಾಗಿದೆ.
ಈ ಎರಡೂ ಕಂಪೆನಿಗಳು ದೇಶದ ವಿವಿಧೆಡೆ ನಡೆಸಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದರಿಂದ ಎರಡೂ ಕಂಪೆನಿಗಳನ್ನು ಕಪ್ಪು ಪಟ್ಟಿಗೆ (ಬ್ಲ್ಯಾಕ್ಲಿಸ್ಟ್) ಸೇರಿಸಬೇಕೆಂದು ಅನೇಕ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಪತ್ರ ಬರೆದಿವೆ.
ವಿಶ್ವಬ್ಯಾಂಕ್ ಕೂಡ ಈ ಕಂಪೆನಿಯ ಪಾರದರ್ಶಕತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ. ಅಲ್ಲದೆ, ನಮ್ಮ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ನಡೆಸದಂತೆ ಸೂಚಿಸಿದೆ. ಹೀಗಿದ್ದೂ ಸರ್ಕಾರ ಇದೇ ಕಂಪೆನಿಗೆ ಕಾಮಗಾರಿ ನೀಡಿರುವುದು ಸಂಶಯ ಮೂಡಿರುವುದರಿಂದ ಯೋಜನೆ ಕೈಬಿಡಲು ಸಲಹೆ ಮಾಡುವಂತೆ ಮನವಿ ಮಾಡಲಾಗಿತ್ತು.
ಬೆಂಗಳೂರಿನ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಫ್ಲೈಓವರ್ವರೆಗೆ ದೇಶದಲ್ಲೇ ಪ್ರಥಮ ಎನ್ನಲಾದ ಉಕ್ಕಿನ ಸೇತುವೆ ನಿರ್ಮಾಣ ಮಾಡುವುದು ರಾಜ್ಯ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲೊಂದಾಗಿತ್ತು. ಆದರೆ ಯೋಜನೆಗೆ 1900 ಕೋಟಿ ರೂ. ವೆಚ್ಚ ನಿಗದಿಪಡಿಸಿದ್ದರಿಂದ ವಿವಿಧ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.
ಅದರಲ್ಲೂ ಕೆಲ ಸಂಘಸಂಸ್ಥೆಗಳು ಮಾನವ ಸರಪಳಿ, ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಯೋಜನೆ ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದ್ದರು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜಾಧ್ಯಕ್ಷ ಕುಮಾರಸ್ವಾಮಿ ಪಂಜಾಬ್ ಮತ್ತು ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗೆ ಹಣ ಕ್ರೋಢೀಕರಿಸುವ ಉದ್ದೇಶದಿಂದಲೇ ಸರ್ಕಾರ ಈ ಯೋಜನೆಯನ್ನು ಆತುರಾತುರವಾಗಿ ಕೈಗೊಂಡಿದೆ ಎಂದು ಆರೋಪಿಸಿದ್ದರು.
ಸಾರ್ವಜನಿಕರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಎಲ್ ಅಂಡ್ ಟಿ ಕಂಪೆನಿಗೆ ಗುತ್ತಿಗೆ ನಿರ್ವಹಣೆ ನೀಡಿದ್ದರೆ, ಬಿಡಿಎಗೆ ಇದರ ಉಸ್ತುವಾರಿ ನೀಡಲಾಗಿತ್ತು. ಕರ್ನಾಟಕ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಕಾಮಗಾರಿ ಅಧಿಕೃತವಾಗಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು.
Discussion about this post