ಮುಂಬೈ, ಅ.12: ಉರಿ ಸೆಕ್ಟರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ರಾಜಕೀಯ ಸ್ವಾರ್ಥಕ್ಕಾಗಿ ಹೇಳಿಕೆಗಳನ್ನು ವಿವಿಧ ನಾಯಕರು ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸೀಮಿತ ದಾಳಿಯ ಯಶಸ್ಸಿನ ಕೀರ್ತಿ ಭಾರತೀಯ ಸೇನೆಗೆ ಸೇರಬೇಕು ಎಂದಿದ್ದಾರೆ.
ಎಂಇಟಿ 2016ರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಪಿಒಕೆಯಲ್ಲಿ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆಯ ಸಾಹಸದಿಂದ ಈ ಯಶಸ್ಸು ದೊರೆತಿದೆ. ಈ ದಾಳಿಯ ಯಶಸ್ಸಿನ ಫಲವೇನಿದ್ದರೂ ಭಾರತೀಯ ಸೇನೆಗೆ ಸಲ್ಲಬೇಕಿದೆ ಮತ್ತು ಸೀಮಿತ ದಾಳಿಯ ನಿರ್ಧಾರ ತೆಗೆದುಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಸಲ್ಲಬೇಕಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕ ಪ್ರಧಾನಿ ಮೋದಿಯವರ ಸರ್ಕಾರಕ್ಕೆ ಹಾಗೂ ಭಾರತೀಯ ಸೇನೆಗೆ ಪ್ರತಿಪಕ್ಷಗಳು ಸಾಕಷ್ಟು ಬೆಂಬಲಗಳನ್ನು ವ್ಯಕ್ತಪಡಿಸಿದ್ದವು. ಆದರೆ, ಈ ಯಶಸ್ಸನ್ನು ಸಹಿಸದ ಕಾಂಗ್ರೆಸ್ ಸೇರಿದ ಎಡಪಕ್ಷಗಳು, ಸೀಮಿತ ದಾಳಿ ಕುರಿತಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ರಾಜಕೀಯ ಕೆಸರೆರಚಾಟ ಆರಂಭಿಸಿದ್ದವು.
ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಆರಂಭವಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಜನರ ಗಮನ ಸೆಳೆಯಲು ಭಾರತೀಯ ಸೇನೆಯನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಇನ್ನೂ ಕೆಲ ನಾಯಕರು ಸೇನೆಯ ದಾಳಿ ಕುರಿತಂತೆ ಸಾಕ್ಷ್ಯಾಧಾರ ಒದಗಿಸುವಂತೆಯೂ ಆಗ್ರಹಿಸಿದ್ದರು.
Discussion about this post