ವರ್ಷಕ್ಕೊಮ್ಮೆ ಕನ್ಯಾಮಾಸದ ಕೃಷ್ಣ ಪಾಡ್ಯದಿಂದ ಅಮವಾಸ್ಯೆಯ ವರೆಗಿನ ಹದಿನೈದು ದಿನಗಳ ಈ ಪಕ್ಷವು ಸರ್ವಪಿತೃ ಶ್ರಾದ್ಧ ಕಾಲವಾಗುತ್ತದೆ. ಸಾಮಾನ್ಯವಾಗಿ ಈ ಪಿತೃಕಾರ್ಯ ಮಾಡುವವರು ಅವರವರ ಪಿತೃಗಳ ಮೃತ ತಿಥಿಯಲ್ಲಿ ಮಾಡುವುದು ವಾಡಿಕೆಯಾಗಿದೆ . ಈ ಪಿತೃಕಾರ್ಯವು ಅತ್ಯಂತ ಪವಿತ್ರವೂ, ಪುಣ್ಯಪ್ರದವೂ ಆದಂತಹ ಒಂದು ಸಂಸ್ಕಾರವಾಗಿದೆ. ಬಹಳ ಪೂರ್ವದಲ್ಲಿ ಇದು ಪುರೂರವ ನದೀತೀರದಲ್ಲಿ( ಇದು ಸಿಂಧೂ ನದಿಯ ಒಂದು ಉಪನದಿಯಾಗಿದ್ದು, ಕೃಷ್ಣನ ಕಾಲಾನಂತರ ಹೇಗೆ ಸರಸ್ವತಿಯು ಅಂತರ್ಗಾಮಿಯಾದಳೋ ಹಾಗೆಯೇ ಇದು ಅಂತರ್ಗಾಮಿಯಾಗಿ ಹೋಯಿತು.ಈಗಿನ ಬೆಲೂಚಿ ಪ್ರಾಂತದಲ್ಲಿ ಈ ನದಿಯು ಸಿಂಧೂ ನದಿಯೊಂದಿಗೆ ಸಂಗಮವಾಗಿತ್ತು. ಹೀಗಾಗಿಯೇ ಶ್ರಾದ್ಧ ಮಂತ್ರದಲ್ಲಿ ‘ಪುರೂರವಾರ್ದ್ದೇ ‘ ಎಂದು ಪ್ರಾರಂಭವಾಗುತ್ತದೆ.
ಯಾಕೆ ಮಹಾಲಯ ಕಾರ್ಯ ಮಾಡಬೇಕು?
ಮಹಾಲಯ ಕಾರ್ಯದ ಈ ಕಾಲವು ರವಿ ಚಂದ್ರರು ಪರಸ್ಪರ ಸಮೀಪ ಇರುವ ಕಾಲ. ಇಲ್ಲಿ ಮಂತ್ರದಲ್ಲೂ ‘ ಕನ್ಯಾಗತೇ’ ಎಂದಿದೆ.ಇವರ ಮದ್ಯದಲ್ಲಿರುವ ಸ್ಥಳವೇ ಸ್ವರ್ಗಲೋಕ.ಇದನ್ನು ನಾವು spectrum ಎಂದು ಈಗಿನ ಭಾಷೆಯಲ್ಲಿ ಕರೆಯಬಹುದು. ಇಲ್ಲಿಗೆ ನಮ್ಮ ಪಿತೃಗಳ ಪಯಣವಾಗಬೇಕು.ಅಲ್ಲಿಂದ ಮಳೆಯ ಮೂಲಕವಾಗಿ ಮತ್ತೆ ಇಳೆಗೆ ಇಳಿದು ಭತ್ತ,ಗೋದಿ ಬೆಳೆಯೊಳಗೆ ಈ ಜೀವಾತ್ಮ ( ಜೀನುಗಳು) ಸೇರಿಕೊಂಡು ಮತ್ತೆ ಅದೇ ವಂಶದ ಮಾನವನಲ್ಲಿ ಸೇರಿಕೊಳ್ಳುತ್ತವೆ.ನಂತರ ಮನುಷ್ಯ ಜನನ.
ಇದೊಂದು ರೀತಿಯ cycling theory.ಯಾವ ಆಧುನಿಕ ಕಣ್ಣುಗಳಿಗೂ ಕಾಣದಂತಹ ವಿಚಾರ.ಇದನ್ನು ತಿಳಿಯಲು ಮನುಷ್ಯನ ಮೂರನೆಯ ಕಣ್ಣಿಗೆ ಮಾತ್ರ ಸಾಧ್ಯ.ಆದರೆ ಅದೊಂದು ಇದೆಯೇ, ? ಅದು ಸುಳ್ಳು ಎಂದು ವಾದಿಸುವವರಲ್ಲಿ ನಾವು ವಾದ ಮಾಡುವುದು ಅಸಾಧ್ಯ. ಅನುಭವಿಸುವಿಕೆಯೇ ಮೂರನೆಯ ಕಣ್ಣು.ಇದು ಇರುವುದು ಭ್ರೂಮಧ್ಯದಲ್ಲಿ. ಇದನ್ನು ಜಾಗೃತ ( activate) ಗೊಳಿಸಲು ನಮ್ಮ ಉಪಾಸನೆಗಳೇ ಮುಖ್ಯ.
ಹಾಗೆ ತಿಳಿಯಲು ಅಸಾಧ್ಯವಾದುದಕ್ಕೆ ‘ ತಸ್ಮತ್ ಶಾಸ್ತ್ರ ಪ್ರಮಾಣೇಶು ‘ ಎಂದು ಶಾಸ್ತ್ರಗಳಲ್ಲಿ ನಂಬಿಕೆ ಇಟ್ಟು ಅದರ ಪ್ರಕಾರವೇ ನಡೆದುಕೊಳ್ಳುವುದು ಕ್ಷೇಮ.
ಈ ಮಹಾಲಯ ಕಾರ್ಯದಲ್ಲಿ ನಾವು ಜೀವನದಲ್ಲಿ ಯಾರಲ್ಲೆಲ್ಲ , ಯಾವುದರಲ್ಲೆಲ್ಲ ಋಣಿಗಳಾಗಿದ್ದೇವೋ ಅಂತಹ ಗತಿಸಿದವರಿಗೆಲ್ಲಾ ಪಿಂಡ ಪ್ರಧಾನ ಮಾಡುವ ವಿಧಿ ಇದೆ.ಎಲ್ಲ ಬಿಟ್ಟರೆ ಶ್ವಾನಕ್ಕೂ ಒಂದು ಹವಿಸ್ಸಿನ ಭಾಗ ಇಡುವ ಪದ್ಧತಿ ಇದೆ.ನೋಡಿ ಎಂತಹ ಒಂದು ಪದ್ಧತಿ ನಮ್ಮ ಸನಾತನ ವೈದಿಕ ಪರಂಪರೆಯದ್ದು.
ನಮ್ಮ ಆಪ್ತರು, ಪರಿಚಯಸ್ತರು, ದೇಶದ ಮಹಿಮಾನ್ವಿತರು, ದೇಶ ಕಾಯುವ ಸೈನಿಕರು ಯಾರಾದರೂ ಒಬ್ಬರು ಸತ್ತರೆ ಈಗ media ( f b: twitter ) ಇತ್ಯಾದಿಗಳ ಮೂಲಕ ಶ್ರದ್ಧಾಂಜಲಿ ಸಮರ್ಪಿಸುವಂತೆ, ಹುಟ್ಟು ಹಬ್ಬಕ್ಕೆ ಶುಭ ಕೋರುವಂತೆ ಇದೊಂದು ಪಾರಮಾರ್ಥಿಕ ನಮನ. ಪರಿಚಯ ಇಲ್ಲದವರಿಗೆ, ನಮ್ಮ ಅನುಭವದಲ್ಲಿ ಇಲ್ಲದವರಿಗೆ ನಾವು ಶ್ರದ್ಧಾಂಜಲಿಯಾಗಲೀ, ಶುಭಾಶಯಗಳಾಗಲೀ ಹೇಳುತ್ತೇವೆಯೇ? ಹಾಗೆಯೇ ನಮ್ಮ ಅನುಭವದಲ್ಲಿ ಬರುವವರಿಗೆಲ್ಲ ಮಹಾಲಯದಲ್ಲಿ ಪಿಂಡ ತರ್ಪಣಾದಿಗಳನ್ನು ಸಲ್ಲಿಸುವ ಪವಿತ್ರ ಕೆಲಸವಿದೆ. ವಿದ್ಯುತ್ತಾಘಾತೇ ಮೃತಃ ,ಸಿಂಹ ವ್ಯಾಗ್ರಾದಿ ಮುಖೇನ ಹತೇ, ಕೃಷಿಕಾರ್ಯ ಕರ್ಮಯೋಗಿ ಹತೇ ಇತ್ಯಾದಿ ಪ್ರಧಾನಗಳಿವೆ. ಹಿಂದಿನ ಕ್ರಮ ಬೇರೆ. ವಿದ್ಯುತ್ತಿನಿಂದ ಹತ ಎಂದರೆ ನಮ್ಮ ಜೀವನಕ್ಕೆ ಸಹಕರಿಸಿದ ರೈತನು ಸಿಡಿಲಾಘಾತದಿಂದ ಸತ್ತಿದ್ದಿದ್ದರೆ ಎಂಬ ಅರ್ಥ.ಈಗ ವಿದ್ಯುತ್ ಇಲಾಖೆಯ ನೌಕರ ಎಂದೂ ಆಗುತ್ತದೆ.ಸಿಂಹ ವ್ಯಾಗ್ರಗಳಿಂದ ಸತ್ತವರು ಎಂದರೆ forest department ಎಂದು ತಿಳಿಯಬೇಕು. ವಿಚಾರ ಒಂದೆ. ಆದರೆ ಕಾಲಗಳ ರೂಪ ಮಾತ್ರ ವೆತ್ಯಾಸವಷ್ಟೆ.
ಯಾರು ಮಹಾಲಯ ಕಾರ್ಯಕ್ಕೆ ಅರ್ಹರು?
೧. ಆ ವ್ಯಕ್ತಿಗೆ ಪಿಂಡಾಧಿಕಾರ ಇರಬೇಕು.ತಂದೆಯ ಉತ್ತರ ಕ್ರಿಯೆ ಮಾಡಿರಬೇಕು.ಅಂದರೆ ತಂದೆ ಇಲ್ಲದವರಿಗೆ ಅಧಿಕಾರವಿದೆ.
೨.ಒಂದೇ ತಾಯಿಯ ಮಕ್ಕಳಲ್ಲಿ ಜೇಷ್ಟನಿಗೆ ಅಧಿಕಾರ.ಅವನಿಲ್ಲದಿದ್ದರೆ ಕನಿಷ್ಟನಿಗೆ. ಅವನೂ ಇಲ್ಲದಿದ್ದರೆ ಉಳಿದವರು ಯಾರೂ ಆಗಬಹುದು.
ಕೆಲವೆಡೆ ದೊಡ್ಡ ಕುಟುಂಬದಲ್ಲಿ ಎಲ್ಲೋ ಒಂದು ಕಡೆ ಹಾಕುತ್ತಾರೆ. ನಮಗೇನಿಲ್ಲ ಎಂದು ಸುಮ್ಮನಿರುವವರಿದ್ದಾರೆ. ಇದು ತಪ್ಪು. ಇಲ್ಲಿ ತಂದೆಯ ಭಾಗದ ಸಪತ್ನೀಕ ಪಿತು ಪಿತಾಮಹ ಪ್ರಪಿತಾಮಹರಿಗೆ ಆರು ಪಿಂಡ, ತಾಯಿಯ ಕಡೆಯ ಸಪತ್ನೀಕ ಪಿತುಃಪಿತಾಮಃ ಪ್ರಪಿತಾಮಃ ಎಂಬ ಆರು ಪಿಂಡ.ಒಟ್ಟಿಗೆ ಹನ್ನೆರಡು ಪಿಂಡ. ಕೊನೆಗೆ ಜ್ಯೇಷ್ಟಾದಿ ಕನಿಷ್ಟಾದಿ ಎಂಬ ಒಂದು ಪಿಂಡ. ಇದು ಪ್ರಧಾನ ಪಿಂಡಗಳು.ನಂತರ ಇದರ ಸುತ್ತು ( ದಿಕ್ಕುಗಳ ಕಲ್ಪನೆ ಇದೆ) ಬಂದು, ಸೇವಕರು,ಅಲ್ಲದೆ ಮೇಲೆ ಹೇಳಿದ ಗತಿಸಿದವರಿಗೆ ಪಿಂಡ ಇಡುವ ಪದ್ಧತಿ.
ಕುಟುಂಬ ಬೆಳೆಯುತ್ತಾ ಹೋದಂತೆ ತಾಯಿಯೂ ಬೇರೆ ಬೇರೆ ಆಗುತ್ತಾ ಹೋಗುತ್ತದೆ.ಆಗ ಅವರ ಮಕ್ಕಳಿಗೆ ಅರ್ಹತೆ ಬರುತ್ತದೆ. ಉದಾಹರಣೆಗೆ ಅಜ್ಜನ ನಾಲ್ಕು ಗಂಡುಮಕ್ಕಳ ಮಕ್ಕಳಿಗೆ ಮಹಾಲಯ ಬೇರೆ ಬೇರೆ ಬೇರೆಯೇ ಆಗಬೇಕು.ಸುಲಭವಾಗಿ ಹೇಳಬೇಕೆಂದರೆ ಒಂದು ತಾಯಿಯ ಸಂತಾನದಲ್ಲಿ ಒಬ್ಬರು ಮಾಡಿದರೆ ಸಾಕು. ಕೆಲವೆಡೆ ತಾಯಿ ಅಜ್ಜಿ ಜೀವಂತ ಇದ್ದರೆ ಅವರಿಗೆ ಪಿಂಡ ಹಾಕುವ ಕ್ರಮವಿಲ್ಲ.ಅದಕ್ಕಾಗಿ ಅವರ ಸಾಲಿನಲ್ಲಿ ಗತಿಸಿದ ಅವರ ಹಿರಿಯರಿಗೆ ಸ್ಥಾನ. ಉದಾಹರಣೆಗೆ ತಾಯಿ, ತಾಯಯಿ ತಾಯಿ ಜೀವಂತವಾಗಿದ್ದರೆ ಅಲ್ಲಿ ಮಾತೃ ಪಿಂಡದ ಜಾಗದಲ್ಲಿ ವೃದ್ಧ ಪ್ರಪಿತಾಮಹಿ ,ವೃದ್ಧ ಪ್ರಪಿತಾಮಹಿ ಎಂದು ಪಿಂಡ ಇಡಬೇಕು.
ಮೋಕ್ಷ ಹೊಂದಿದವರಿಗೆ ?
ಇದು ಒಳ್ಳಯ ಪ್ರಶ್ನೆ. ಯಾರು ಪುನರ್ಜನ್ಮ ಇಲ್ಲದ ಮೋಕ್ಷವಾಸಿಗಳಾಗಿದ್ದಾರೆ ಎಂಬುದು ನಮಗೇನು ಗೊತ್ತು? ಮಂತ್ರದಲ್ಲಿ ‘ಸ್ವರ್ಗಂ ಗಚ್ಛತು ಪಿತರಃ’ ಎಂದೇ ಹೇಳಿದೆಯೇ ಹೊರತು ‘ ಮೋಕ್ಷಂ ಗಚ್ಛತು ಪಿತರಃ’ ಎಂದು ಹೇಳಿಲ್ಲ. ಅಂದರೆ ನೀವು ಮಾಡಿದ ಪುಣ್ಯಾನುಸಾರ ಸ್ವರ್ಗ ಸುಖ ಅನುಭವಿಸಿ ಮತ್ತೆ ನಮ್ಮ ವಂಶದಲ್ಲಿ ಹುಟ್ಟಬೇಕು ಎಂಬ ತತ್ವ. ಆದರೂ ಪ್ರಾರಂಭದ ಸಂಕಲ್ಪದಲ್ಲಿ ‘ ಪಿತೃ ಅಕ್ಷಯ ಪುಣ್ಯಲೋಕ ಪ್ರಾಪ್ತ್ಯರ್ಥೇ ಕರ್ಮ ಕರಿಷ್ಯೇ’ ಎಂದು ಹೇಳಿದೆ.ಅರ್ಥಾತ್ ಒಂದೋ ಪುನರ್ಜನ್ಮ ಇಲ್ಲದ, ಕ್ಷಯವಾಗದಂತಹ ಪುಣ್ಯಲೋಕ ಪ್ರಾಪ್ತಿಯಾಗಲೀ, ಅಥವಾ ಸ್ವರ್ಗ ಪ್ರಾಪ್ತಿಯಾಗಿ ಮತ್ತೆ ನಮ್ಮ ಉದರದಲ್ಲಿ ಜನಿಸಬೇಕು ಎಂಬ ಅರ್ಥ. ಇದೆಲ್ಲಾ ಪುನರ್ಜನ್ಮ ವಿಚಾರ ಸಂಹಿತೆಗಳಲ್ಲಿ, ಗರುಡಪುರಾಣಗಳಲ್ಲಿ ಸಾಕಷ್ಟು ವಿಚಾರಗಳಿವೆ. ರಕ್ತ ಸಂಬಂಧಿ ಪಿತೃಗಳು ನಮ್ಮ ವಂಶದಲ್ಲಿ ಜನಿಸಲಿ, ಇತರ ಆವರಣ ಪಿಂಡಗಳ ಪಿತೃಗಳಿಗೆ ಸ್ವರ್ಗವೂ,ಉತ್ತಮ ಜನ್ಮವೂ ಬರಲಿ ಎಂಬ ಉದ್ದೇಶದ ಕ್ರಿಯೆಯೇ ಸರ್ವ ಪಿತೃ ಮಹಾಲಯವಾಗಿದೆ.
Discussion about this post