ಇಸ್ಲಾಮಾಬಾದ್, ಸೆ.28: ಭಾರತದ ವಿರುದ್ಧ ಕತ್ತಿ ಮಸೆಯುತ್ತಾ, ಅಪ್ರಚೋದಿತ ದಾಳಿಗಳನ್ನು ತನ್ನ ಸೇನೆ ಹಾಗೂ ಪ್ರಾಯೋಜಿತ ಉಗ್ರರ ಮುಖಾಂತರ ನಡೆಸುತ್ತಿರುವ ಪಾಕ್‌ಗೆ ಭಾರತದ ಪೆಟ್ಟು ನೀಡುವ ಮುನ್ನವೇ ವ್ಯಾಜ್ಯ ಅಂತರ‌್ರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರುತ್ತಿದೆ.
ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿ ನೀರನ್ನು ನಿಲುಗಡೆ ಮಾಡುತ್ತದೆ ಎಂಬ ಊಹಾಪೋಗಳ ಹಿನ್ನೆಲೆಯಲ್ಲಿ ಪಾಕಿಸ್ಥಾಣ ಸರ್ಕಾರ ಅಂತರ‌್ರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ.
ಅಟಾರ್ನಿ ಜನರಲ್ ಅಶ್ತರ್ ಆಸಫ್ ಅಲಿ ನೇತೃತ್ವದ ಪಾಕಿಸ್ಥಾನ ನಿಯೋಗ ಅಮೆರಿಕಾದ ವಾಷಿಂಗ್ಟನ್‌ನಲ್ಲಿ ವಿಶ್ವಬ್ಯಾಂಕ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಪಾಕಿಸ್ಥಾನಕ್ಕೆ ಹರಿಯುತ್ತಿರುವ ಸಿಂಧೂ ನದಿ ನೀರನ್ನು ಭಾರತ ತಡೆಯಲೆತ್ನಿಸುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.
ಅಲ್ಲದೆ ಭಾರತದ ಬಹು ಉದ್ದೇಶಿತ ಕಿಶನ್ ಗಂಗಾ ಯೋಜನೆಗೂ ಪಾಕಿಸ್ಥಾನ ಅಡ್ಡಗಾಲು ಹಾಕಲು ಯತ್ನಿಸುತ್ತಿದ್ದು, ಝೀಲಂ ನದಿಯಲ್ಲಿ ಭಾರತ ನಡೆಸುತ್ತಿರುವ ಕಿಶನ್ ಗಂಗಾ ಯೋಜನೆ ಕುರಿತಂತೆ ಪಾಕಿಸ್ಥಾನ ತಕರಾರು ಅರ್ಜಿ ಸಲ್ಲಿಸಲು ಮುಂದಾಗಿದೆ. ಅಂತೆಯೇ ನೀಲಂ ಹಾಗೂ ಚಿನಾಬ್ ನದಿಗಳಲ್ಲಿನ ಭಾರತದ ಜಲವಿದ್ಯುತ್ ಘಟಕ ಯೋಜನೆಗೂ ಪಾಕಿಸ್ಥಾನ ತಕರಾರು ತೆಗೆದು ಅರ್ಜಿ ಸಲ್ಲಿಸಿದೆ.
ಪಾಕ್ ಶೃಂಗ ಸಭೆ ರದ್ದು?
ಉರಿ ಉಗ್ರ ದಾಳಿ ಕುರಿತಂತೆ ಪಾಕಿಸ್ತಾನದ ವಿರುದ್ಧ ಭಾರತ ತನ್ನ ವಿರೋಧ ಮುಂದುವರೆಸಿದ್ದು, ಪಾಕಿಸ್ಥಾನದಲ್ಲಿ ನಡೆಯುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ಸಭೆಯನ್ನು ಬಹಿಷ್ಕರಿಸಿತ್ತು. ಇದರ ಬೆನ್ನಲ್ಲೇ ಇತರೆ ಸಾರ್ಕ್ ರಾಷ್ಟ್ರಗಳೂ ಕೂಡ ಸಭೆಯನ್ನು ಬಹಿಷ್ಕರಿಸಿದ್ದು, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ಸಾರ್ಕ್ ಸಭೆಯನ್ನು ಬಹಿಷ್ಕರಿಸಿ ಪತ್ರ ಬರೆದಿವೆ.
ಇದೇ ನವೆಂಬರ್ ೯ ಮತ್ತು ೧೦ರಂದು ಪಾಕಿಸ್ಥಾನ ರಾಜಧಾನಿ ಇಸ್ಲಾಮಾಬಾದಿನಲ್ಲಿ ಸಾರ್ಕ್ ಶೃಂಗಸಭೆ ನಡೆಯಲಿದ್ದು, ಈಗಾಗಲೇ ಭಾರತ ಸರ್ಕಾರ ತಾನು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಣೆ ಮಾಡಿದೆ. ಗಡಿಯಲ್ಲಿನ ಭಯೋತ್ಪಾದನೆಗೆ ಪಾಕಿಸ್ಥಾನ ಕುಮ್ಮಕ್ಕು ನೀಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ತಾನು ಸಿದ್ಧವಿಲ್ಲ ಎಂದು ಹೇಳಿ ಭಾರತ ಸಭೆಯಿಂದ ಹಿಂದೆ ಸರಿದಿತ್ತು. ಇದೀಗ ಭಾರತದ ಬೆನ್ನಿಗೆ ನಿಂತಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ತಾವೂ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪತ್ರಬರೆದಿವೆ.
ಇನ್ನು ತನ್ನ ನಿಲುವಿನ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಾಂಗ್ಲಾದೇಶ ಸರ್ಕಾರ, ತನ್ನ ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕುತ್ತಿರುವ ದೇಶದಲ್ಲಿ ಸಾರ್ಕ್ ಶೃಂಗಸಭೆ ನಡೆಯುತ್ತಿರುವುದು ಸರಿಯಲ್ಲ. ಹೀಗಾಗಿ ತಾನು ಸಭೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿದೆ. ಇಂತಹುದೇ ಕಾರಣ ಒಡ್ಡಿ ಆಫ್ಘಾನಿಸ್ತಾನ ಕೂಡ ಶೃಂಗಸಭೆಯಿಂದ ಹಿಂದೆ ಸರಿದಿದೆ.
ಸಾರ್ಕ್ ಶೃಂಗಸಭೆ ನಡಾವಳಿಗಳ ಪ್ರಕಾರ ಒಕ್ಕೂಟದ ಯಾವುದೇ ಒಂದು ರಾಷ್ಟ್ರ ಸಭೆಯನ್ನು ಬಹಿಷ್ಕರಿಸಿದರೆ ಶೃಂಗಸಭೆ ರದ್ದಾಗುತ್ತದೆ. ಹೀಗಾಗಿ ಪಾಕಿಸ್ಥಾನದಲ್ಲಿ ಯೋಜನೆಯಾಗಿದ್ದ ೨೦೧೬ರ ಶೃಂಗಸಭೆ ರದ್ದಾಗುವುದು ಬಹುತೇಕ ಖಚಿತವಾಗಿದೆ.
ಸಿಂಧೂ ನದಿ ನೀರಿನ ವಿಚಾರದಲ್ಲಿ ಭಾರತದ ಸಂಭಾವ್ಯ ನಡೆಗಳ ಕುರಿತಾಗಿ ಪಾಕ್ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪಾಕಿಸ್ಥಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಎಜೀಜ್, ಭಾರತದ ನಡೆ ಪರೋಕ್ಷ ಯುದ್ಧದಂತಿದೆ. ಅಂತ್ರಾಷ್ಟ್ರೀಯ ನ್ಯಾಯಾಲಯದಲ್ಲಿ ತಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.
ಇದೇ ವೇಳೆ ತನ್ನ ತಕರಾರು ಅರ್ಜಿ ವಿಲೇವಾರಿಯ ತ್ವರಿತ ವಿಚಾರಣೆಗಾಗಿ ಮೂವರು ನ್ಯಾಯಾಧೀಶರ ಪೀಠವನ್ನು ಕೂಡಲೇ ರಚಿಸುವಂತೆಯೇ ಪಾಕಿಸ್ಥಾನ ವಿಶ್ವಬ್ಯಾಂಕ್‌ಗೆ ಮೊರೆ ಇಟ್ಟಿದೆ.
Discussion about this post