ಯಾದಗಿರಿ, ಸೆ.8: ಬಿಟ್ಸರ್ಡ್ ಸಂಸ್ಥೆಯಲ್ಲಿ ಯುವತಿಯರಿಗೆ ನೀಡುತ್ತಿರುವ ತರಬೇತಿ ಮಹತ್ವಪೂರ್ಣವಾಗಿದ್ದು, ಆರಂಭಿಕ ಹಂತದಲ್ಲಿಯೇ ಉತ್ತಮ ತರಬೇತಿ ಹೊಂದಿದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ವೃತ್ತಿ ಕೌಶಲ್ಯ ಅಭಿವೃಧ್ದಿ ಪಡಿಸಿಕೊಂಡು ಸ್ವ-ಉದ್ಯೋಗದೆಡೆಗೆ ಲಕ್ಷ್ಯ ಹರಿಸಿದಲ್ಲಿ ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಡಿ. ಖಾದ್ರಿ, ತಿಳಿಸಿದರು.
ಭಾರತ ಸರ್ಕಾರ ನೇಹರು ಯುವ ಕೇಂದ್ರ ಕಲಬುರಗಿ, ಯಾದಗಿರಿ ಹಾಗೂ ಭೀಮಾ ಸ್ವಯಂ ಉದ್ಯೋಗ ತರಬೇತಿ ಮತ್ತು ಗ್ರಾಮೀಣಾಭಿವೃಧ್ದಿ ಸಂಸ್ಥೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಒಂದು ತಿಂಗಳ ಯುವ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಾಸನ ಹಾಗೂ ಕೌಶಲ್ಯ ಅಭಿವೃಧ್ದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದು ಸೂಕ್ತ ಸಮಯದಲ್ಲಿ ಸೂಕ್ತ ತರಬೇತಿ ಸಿಕ್ಕಲ್ಲಿ ಬದುಕಿನ ಪಯಣ ಯಶಸ್ಸಿನತ್ತ ಸಾಗಲು ಸಾಧ್ಯ ಎಂದರು.
ಕಲಬುರಗಿ ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಶ್ರೀಮತಿ ಮಾಲತಿ ಗಾಯಕವಾಡ, ಮಾತನಾಡಿ, ಮಹಿಳಾ ಸಬಲೀಕರಣ ಪ್ರಸ್ತುತ ಸಮಾಜದಲ್ಲಿ ಅವಶ್ಯಕವಾಗಿರುವದರಿಂದ ಈ ತರಬೇತಿಯನ್ನು ಯುವತಿ ಮತ್ತು ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸಿದ್ರಾಮಪ್ಪ ಮಾಳ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಾದ ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಕೌಶಲ್ಯ ಆಧಾರಿತ ತರಬೇತಿಗಳ ಉಪಯೋಗ ಪಡೆದು ಸಾಧನೆಯನ್ನು ಮಾಡುತ್ತಾ, ಸಮಾಜಕ್ಕೆ, ದೇಶಕ್ಕೆ ಕೊಡುಗೆಯನ್ನು ನೀಡಬೇಕೆಂದು ತಿಳಿಸಿದರು.
ಯಾದಗಿರಿ ಬಿಟ್ಸರ್ಡ್ ಸಂಸ್ಥೆ, ನಿರ್ದೇಶಕ ಮಹ್ಮದ್ ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಂಸ್ಥೆಯಲ್ಲಿ ಮಹಿಳೆಯರಿಗೆ ವಿಶೇಷವಾಗಿ ಸ್ವಯಂ-ಉದ್ಯೋಗದ ತರಬೇತಿಗಳನ್ನು ನೀಡಿ ಸರ್ಕಾರದಿಂದ ದೊರೆಯುವ ಯೋಜನೆಗಳ ಕುರಿತು ನುರಿತ ತರಬೇತಿದಾರರಿಂದ ಈ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ರಾಜಶೇಖರ ಆನೆಗುಂದಿ ಸ್ವಾಗತಿಸಿದರು. ಸೈಯ್ಯದ್ ಕಮರುದ್ಧಿನ್ ಅಲ್ಲಿಪೂರ ನಿರೂಪಣೆ ಮಾಡಿದರು. ಉಪನ್ಯಾಸಕ ಲಕ್ಷ್ಮಣರೆಡ್ಡಿ ವಂದನಾರ್ಪಣೆಗೈದರು. 35 ಜನ ಯುವತಿಯರು ಶಿಬಿರದಲ್ಲಿ ಪಾಲ್ಗೊಂಡರು.
Discussion about this post