ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿದೇಶಗಳಿಂದ ದೇಶಕ್ಕೆ ಆಗಮಿಸುವ ಪ್ರವಾಸಿಗರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ತೆರಳಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕೊರೋನಾ ವೈರಸ್ ನಿಯಂತ್ರಣದ ಕುರಿತು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈಗಾಗಲೇ ಕೊರೋನಾ ವೈರಸ್ ಹರಡದಂತೆ ನಿಗ್ರಹಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಮತ್ತು ಖಾಸಗಿ ವೈದ್ಯರುಗಳಿಗೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೆ ಬರುವ ಕೊರೋನಾ ಬಾದಿತರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಿ, ಚಿಕಿತ್ಸೆ ಮುಂದುವರೆಸುವಂತೆ ಸೂಚಿಸಿದ ಅವರು, ಅಂತಹ ವ್ಯಕ್ತಿಯ ಪೂರ್ವಾಪರ ಹಾಗೂ ಚಲನವಲನಗಳನ್ನು ಹಾಗೂ ಅವರ ಕುಟುಂಬದ ಅವಲಂಭಿತರ, ಅವರೊಂದಿಗೆ ನಿರಂತರ ಸಂಪರ್ಕದಲಿದ್ದವರನ್ನು ಸೂಕ್ಷ್ಮವಾಗಿ ಗಮನಿಸುವಂತೆ ವೈದ್ಯರಿಗೆ ಸೂಚಿಸಿದರು.
ಅಂತೆಯೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 10 ಹಾಸಿಗೆಗಳನ್ನು ಕಾಯ್ದಿರಿಸಬೇಕು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕಳೆದ 15 ದಿನಗಳಲ್ಲಿ ವಿದೇಶ ಪ್ರವಾಸ ಮಾಡಿರುವ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ವಿಶೇಷವಾಗಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ವಿದೇಶಕ್ಕೆ ತೆರಳುವವರು ಹಾಗೂ ವಿದೇಶದಿಂದ ದೇಶಕ್ಕೆ ಆಗಮಿಸಿದವರ ವಿವರಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡಬೇಕು. ಅಲ್ಲದೇ ಜಿಲ್ಲೆಯಾದ್ಯಂತ ನಿರ್ವಹಿಸುತ್ತಿರುವ ಸ್ಟೇಹೋಂಗಳ ಮಾಲೀಕರಿಗೆ ಈ ಕುರಿತು ಸೂಚನೆ ನೀಡುವಂತೆ, ಹಾಗೂ ಸ್ಟೇ ಹೋಂಗಳಲ್ಲಿ ವಸತಿಗಾಗಿ ಆಗಮಿಸುವವರ ಕುರಿತು ಮಾಹಿತಿ ನೀಡುವಂತೆಯೂ ಅವರು ಸೂಚಿಸಿದರು.
ಇವರೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂಧಿಗಳು ಈ ಕುರಿತು ವಿಶೇಷ ಗಮನಹರಿಸುವಂತೆ ಅವರು ಸೂಚಿಸಿದರು.
ಈ ಸಂಬಂಧ ಈಗಾಗಲೇ ಜಿಲ್ಲೆಯ ಹೋಟೆಲ್‌ಗಳ ಮಾಲೀಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ, ರೈಲ್ವೆ, ಶಿಕ್ಷಣ ಇಲಾಖೆ, ಖಾಸಗಿ ಆಸ್ಪತ್ರೆ, ಆಯುಷ್ ಇಲಾಖೆ, ಪಶುವೈದ್ಯಕೀಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳಿಗೆ ಪ್ರಾಥಮಿಕ ಮಾಹಿತಿ ನೀಡಲಾಗಿದೆ ಎಂದವರು ನುಡಿದರು.
ಸರ್ಕಾರವೇ ಘೋಷಿಸಿರುವ ಮಾರಣಾಂತಿಕ ಕಾಯಿಲೆ ಕೊವಿಡ್-19 ಕಾಯಿಲೆಯ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಅಲ್ಲದೇ ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಅವರು, ಜನಸಾಮಾನ್ಯರು ಈ ಕಾಯಿಲೆಯ ಸ್ವರೂಪ ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ತಿಳಿದಿರುವುದು ಕ್ಷೇಮ ಎಂದವರು ತಿಳಿಸಿದ್ದಾರೆ.
ಈ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಜಿಲ್ಲೆಗೆ ಬೇಕಾಗುವ ಔಷಧ ಮತ್ತು ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ತಪಾಸಣೆಗೆ ದಾಖಲಾಗುವ ರೋಗಿಗಳ ರಕ್ತದ ಮಾದರಿ ಪರೀಕ್ಷೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯರು ಸದಾ ಸಿದ್ಧರಾಗಿರುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಸಹಜವಾಗಿ ಎಲ್ಲರೂ ಕಾಲಕಾಲಕ್ಕೆ ಕೈತೊಳೆಯುವ, ಕರವಸ್ತ್ರ ಬಳಸುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಮಾಸ್ಕ್ ಧರಿಸಿಕೊಂಡು ಶಾಲೆಗೆ ಬರಬೇಕು ಎಂಬುದು ಕಡ್ಡಾಯವಲ್ಲ. ಒಂದು ವೇಳೆ ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ಮಕ್ಕಳ ಆರೋಗ್ಯ ಸುಧಾರಿಸುವವರೆಗೆ ಶಾಲೆಗೆ ಕಳಿಸದಂತೆ ಸುರಕ್ಷತಾ ಕ್ರಮ ಅನುಸರಿಸಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ. ಲೇಫಾಕ್ಷಿ, ಡಾ. ಶಂಕರಪ್ಪ, ಡಾ. ಶಮಾ, ಡಾ. ನಟರಾಜ್ ಮುಂತಾದವರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post