ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್19 ಪ್ರಕರಣಗಳು ಹೆಚ್ಚಾಗಿ ಗಂಗಾವತಿ ತಾಲೂಕಿನಲ್ಲಿ ಹೆಚ್ಚು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ ಟೌನ್ ಹಾಗೂ ಶ್ರೀರಾಮನಗರದಲ್ಲಿ 10 ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೋನಾ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಅವರು ಮಾತನಾಡಿದರು.
ಸ್ಥಳೀಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಗಂಗಾವತಿ ಟೌನ್ ಶ್ರೀರಾಮನಗರಗಳನ್ನು ಕೊರೋನಾ ಹಾಟ್ ಸ್ಪಾಟ್‌ಗಳೆಂದು ಗುರುತಿಸಿ ಜುಲೈ 21ರ ರಾತ್ರಿ 8ರಿಂದ 10 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಕೊಪ್ಪಳ ಭಾಗ್ಯನಗರದ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ಭಾಗ್ಯನಗರವನ್ನು ಲಾಕ್ ಡೌನ್ ಮಾಡಬೇಕೇ ಬೇಡವೇ ಎಂಬುದನ್ನು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಲಾಕ್ ಡೌನ್ ಪ್ರದೇಶಗಳಲ್ಲಿ ತುರ್ತು ಸೇವೆಗ ಆಹಾರ ಪದಾರ್ಥ ಮಾರಾಟಕ್ಕೆ ಕೃಷಿ ಚಟುವಟಿಕೆ ರಸಗೊಬ್ಬರ ಮಾರಾಟಕ್ಕೆ, ಹಾಲಿನ ಬೂತ್ ಮೆಡಿಕಲ್ ಷಾಪ್’ಗಳಿಗೆ ವಿನಾಯಿತಿ ನೀಡಲಾಗಿದೆ. ಮದ್ಯದಂಗಡಿಗಳು ಬಂದ್ ಇರುತ್ತವೆ. ಲಾಕ್ ಡೌನ್ ಸಂಬಂಧ ಜಿಲ್ಲಾಧಿಕಾರಿಗಳು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.
55 ಲಕ್ಷ ರೂ. ಮೊತ್ತದಲ್ಲಿ 1,343 ಆಶಾಕಾರ್ಯಕರ್ತೆಯರಿಗೆ ಹೆಲ್ತ್ ಕಿಟ್ ಖರೀದಿಸಲಾಗುವುದು. ತಾಲೂಕುವಾರು ಐಸಿಯು ಬೆಡ್ ಮಾನಿಟರ್‌ಗಳಿಗೆ 76 ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಲ್ಯಾಬ್ ಟೆಕ್ಷಿಷಿಯನ್ಸ್‌ಗಳ ಕೊರತೆ ನೀಗಿಸಲು ಈಗಾಗಲೇ 13 ಜನರ ಟೆಂಡರ್ ಕರೆಯಲಾಗಿದ್ದು, ಆದಷ್ಟು ಬೇಗ ಅವರನ್ನು ನೇಮಕ ಮಾಡಲಾಗುವುದು. ತುರ್ತು ಲಭ್ಯತೆ ಅವಶ್ಯಕತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು. 30 ಮೊಬೈಲ್ ಹೆಲ್ತ್ ಯುನಿಟ್‌ಗಳನ್ನು ಜಿಲ್ಲೆಯಾದ್ಯಂತ ಆರಂಭಿಸುವುದಾಗಿ ಹಾಗೂ ಜಿಲ್ಲೆಯ ಗಡಿಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಆರಂಭಿಸುತ್ತಿರುವುದಾಗಿ ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ. ಯಾರಾದರೂ ಕೃತಕವಾಗಿ ಗೊಬ್ಬರದ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಕೃಷಿ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕೆಂದು ನಿರ್ದೇಶಿಸಿದರು.
ಎಲ್ಲಾ ಕಡೆಗಳಲ್ಲಿಯೂ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊಮಾ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ. ಲಾಕ್‌ಡೌನ್ ಮಾಡಿದರೆ ಕೊರೋನಾ ಹೋಗುತ್ತದೆ. ಇಲ್ಲದಿದ್ದರೆ ಹೋಗುವುದಿಲ್ಲ ಎನ್ನುವುದೆಲ್ಲ ತಪ್ಪು. ಸರ್ಕಾರದ ಸೂಚನಾ ಕ್ರಮಗಳಿಗೆ ಜನರ ಸಹಕಾರ ಬೇಕು.
ರಾಜ್ಯ ಸರ್ಕಾದ ವಿಫಲ ಆಗಿಲ್ಲ. ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿದರು.
ಸುದ್ದಿಗೋಷ್ಠಿಗೂ ಮುನ್ನ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮಾಜಿ ಸಂಸದ ಶಿವರಾಜ್ ತಂಗಡಗಿ ವಿರುದ್ಧ ಹರಿಹಾಯ್ದು, ತಂಗಡಗಿಯವರು ಬಹಳ ಸತ್ಯಹರಿಶ್ಚಂದ್ರರು ಸತ್ಯವಂತರು. ಅವರಂತೆ ಯಾರಿಲ್ಲ. ಹೀಗಾಗಿಯೇ ಕ್ಷೇತ್ರದ ಜನತೆ ಅವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದರು.
Get In Touch With Us info@kalpa.news Whatsapp: 9481252093
Discussion about this post