ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆ ವತಿಯಿಂದ ಈ ಬಾರಿ ನಾಡಹಬ್ಬ ದಸರಾ 10 ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ತಿಳಿಸಿದರು.
ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಾಡಹಬ್ಬ ದಸರಾ-2022ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ನಗರಸಭೆ ವತಿಯಿಂದ ನಾಡಹಬ್ಬ ದಸರಾ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಸೆ.26ರಂದು ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ದಸರಾ ಉತ್ಸವಕ್ಕೆ ಚಾಲನೆ ನೀಡುವರು ಎಂದರು.

ಅ.5ರಂದು ಕೊನೆಯ ದಿನ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳು, ಸುಮಾರು 50ಕ್ಕೂ ಹೆಚ್ಚು ಅಲಂಕೃತಗೊಂಡ ದೇವಾನುದೇವತೆಗಳ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ(ಶಮಿ ಪೂಜೆ) ಕಾರ್ಯಕ್ರಮದ ಮೂಲಕ ರಾವಣನ ಸಂಹಾರದೊಂದಿಗೆ ಅಂತ್ಯಗೊಳ್ಳಲಿದೆ ಎಂದರು.
ನಾಡಹಬ್ಬ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಉಸ್ತುವಾರಿ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಪ್ರಚಾರ ಮತ್ತು ಅಲಂಕಾರ ಸಮಿತಿ, ಮನರಂಜನಾ ಸಮಿತಿ, ದೇವರುಗಳ ಉತ್ಸವ ಸಮಿತಿ ಮತ್ತು ಆಯುಧ ಪೂಜೆ ಉಸ್ತುವಾರಿ ಸಮಿತಿಗಳು ಕಾರ್ಯ ನಿರ್ವಹಿಸಲಿವೆ.

ಪೌರಾಯುಕ್ತ ಮನುಕುಮಾರ್, ವಿವಿಧ ಸಮಿತಿ ಅಧ್ಯಕ್ಷರುಗಳಾದ ವಿ. ಕದಿರೇಶ್, ಲತಾ ಚಂದ್ರಶೇಖರ್, ಆರ್. ಶ್ರೇಯಸ್(ಚಿಟ್ಟೆ), ಜಾರ್ಜ್, ಕಾಂತರಾಜು, ಮಾಜಿ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ನಗರಸಭೆ ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುವಾಸಿನಿ, ಪವನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post