ಮೈಸೂರು, ಸೆ.2: ಪ್ರತಿ ಬಾರಿಗಿಂತಲೂ ವಿಭಿನ್ನವಾಗಿ ಈ ಬಾರಿಯ ದಸರಾ ಆಚರಣೆ ನಡೆಯಲಿದ್ದು, ಈ ಬಾರಿ ವೃದ್ಧಿ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳವರೆಗೂ ಅರಮನೆಯಲ್ಲಿ ದಸರಾ ಆಚರಣೆ ನಡೆಯಲಿದೆ.
ದಸರಾ ಕುರಿತಂತೆ ಈ ಹಿಂದೆ ಮಾತನಾಡಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸರ್ಕಾರಿ ದಸರಾ 11 ದಿನವಿದ್ದರೂ ಖಾಸಗಿ ದಸರಾ 10 ದಿನ ನಡೆಯಲಿದೆ ಎಂದಿದ್ದರು. ಇದು ಒಂದಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾಜಮಾತೆ ಪ್ರಮೋದಾದೇವಿ, ಹಿಂದೆಯೂ ವೃದ್ಧಿ ದಸರಾ ಸಂದರ್ಭದಲ್ಲಿ 11 ದಿನ ಆಚರಣೆ ಮಾಡಿದ್ದೇವೆ. ಈ ಬಾರಿಯೂ ಹಾಗೆಯೇ ನಡೆಯಲಿದೆ ಎಂದಿದ್ದಾರೆ.
ಆಚರಣೆ ಕುರಿತು ವಿವರ ನೀಡಿರುವ ಅವರು, ದಸರಾ ಮಹೋತ್ಸವ ನವರಾತ್ರಿ ಆಚರಣೆಯಾಗಿರುವ ಹಿನ್ನೆಲೆಯಲ್ಲಿ ಅರಮನೆಯೊಳಗೆ 9 ದಿನ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುವುದು. ಜಂಬೂ ಸವಾರಿಯಂದು ಕೆಲ ಸಾಂಪ್ರದಾಯಿಕ ಆಚರಣೆಗಳು ಇರಲಿವೆ. ಹೀಗಾಗಿ ಪ್ರತಿ ವರ್ಷ 10 ದಿನ ಆಚರಣೆ ಮಾಡುತ್ತಿದ್ದೆವು. ಈ ವರ್ಷ ಅ.1ರಿಂದ 11ರವರೆಗೆ ಖಾಸಗಿ ದಸರಾ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿರುವ ಯದುವೀರ ಒಡೆಯರ್, ದಸರಾ ಮಹೋತ್ಸವದ ಖಾಸಗಿ ದರ್ಬಾರ್‌ಗೆ ಸಿದ್ಧತೆಗಳು ನಡೆದಿವೆ. ತಂದೆಯವರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.
News by: ಪುನೀತ್ ಕೂಡ್ಲೂರು
Discussion about this post