ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯ ಐತಿಹಾಸಿಕ ಅಮೃತ ಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಡಿ.28. 29 ಹಾಗೂ 30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಈ ಕುರಿತಂತೆ ಮಹಾಸಭೆಯ ಅಧ್ಯಕ್ಷ ಗಿರಿಧರ್ ಕಜೆ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಾಗೂ ಹವ್ಯಕ ಸಮಾಜವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ದಿಶೆಯಲ್ಲಿ ಆಯೋಜಿಸಲಾಗುತ್ತಿದೆ. ಡಿ.28 ರಂದು ಅಮೃತಮಹೋತ್ಸವ ನಡೆಯಲಿದ್ದು, 29 ಹಾಗೂ 30 ರಂದು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮ ಸಂಪನ್ನವಾಗಲಿದೆ.
ಐತಿಹಾಸಿಕ ಈ ಕಾರ್ಯಕ್ರಮದಲ್ಲಿ 75 ಪುಸ್ತಕ ಲೋಕಾರ್ಪಣೆ, 75 ವೈದೀಕರಿಗೆ ಸನ್ಮಾನ, 75 ಕೃಷಿಕರಿಗೆ ಸನ್ಮಾನ , 75 ಸಾಧಕರಿಗೆ ಸನ್ಮಾನ, 75 ವಿದ್ಯಾರ್ಥಿಗಳಿಗೆ ಸನ್ಮಾನ, 75 ಗೋದಾನ ಮುಂತಾದ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದ್ದು, ಹವ್ಯಕರ ಪಾರಂಪರಿಕ ಬೆಳೆಯಾದ ಅಡಿಕೆ ಕೃಷಿಯ ಸಮಗ್ರ ಪ್ರದರ್ಶನ ಹಾಗೂ ಲೋಕಮಂಗಳಕಾರಿಯಾದ ಯಜ್ಞ ಯಾಗಗಳನ್ನು ಲೋಕಮುಖಕ್ಕೆ ಸಮಗ್ರವಾಗಿ ಪರಿಚಯಿಸುವ ವಿಶೇಷ ಪ್ರದರ್ಶನಗಳು ಸಂಪನ್ನವಾಗಲಿದೆ.
ಹವ್ಯಕ ಸಾಂಸ್ಕೃತಿಕ ಜಗತ್ತು ಕಲೆಗಳ ಮೂಲಕ ಅನಾವರಣವಾಗಲಿದ್ದು, ಉತ್ತರ ಕನ್ನಡ – ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಪ್ರಾಂತ್ಯಗಳ ಹವ್ಯಕರ ಪಾಕ ವೈವಿಧ್ಯಗಳನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಈ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದೆ. ರಾಷ್ಟ್ರಮಟ್ಟದ ಗಣ್ಯರುಗಳು ಅನೇಕ ಮಹನೀಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಹವ್ಯಕ ಸಂಸ್ಕೃತಿ ಸಂಸ್ಕಾರಗಳನ್ನು ಆಸ್ವಾದಿಸಿ, ಆನಂದಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.
ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದ್ದು, ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943 ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಇಂತಹ ಹವ್ಯಕ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮರ್ಥ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬುದು ಮಹಾಸಭೆ ಆಶಯ ವ್ಯಕ್ತಪಡಿಸಿದೆ.
Discussion about this post