ಕೆ.ಎಫ್.ಡಿ. – ಪಿ.ಎಫ್.ಐ. ಕಾರಣ, ರಾಜ್ಯ ಸರ್ಕಾರವೇ ಹೊಣೆ
ಉಡುಪಿ, ಅ.19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 3 ವರ್ಷಗಳಲ್ಲಿ ಸಂಘಪರಿವಾರದ 21ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಯಾಗಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೆ.ಎಫ್.ಡಿ., ಪಿ.ಎಫ್.ಐ. ಸಂಘಟನೆಗಳ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದದ್ದೇ ಕಾರಣ. ಆದ್ದರಿಂದ ಈ ಕೊಲೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಆರ್.ಎಸ್.ಎಸ್.ಕಾರ್ಯಕರ್ತ ರುದ್ರೇಶ್ ಹತ್ಯೆ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ವಿರೋಧಿಸಿ, ಬುಧವಾರ ಜಿಲ್ಲಾ ಬಿ.ಜೆ.ಪಿ. ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇಂತಹ ಕೊಲೆಗಳ ಮೂಲಕ ಯುವಜನತೆ ಸಂಘ ಪರಿವಾರವನ್ನು ಸೇರದಂತೆ ಹೆದರಿಸಬಹುದು ಎಂದು ಸರ್ಕಾರ ತಿಳಿದಂತಿದೆ. ಆದರೇ ಇದು ಸುಳ್ಳು, ಇಂತಹ ಘಟನೆಗಳಿಂದ ಇನ್ನಷ್ಟು ಯುವಕರು ಸಂಘ ಪರಿವಾರವನ್ನು ಸೇರುತ್ತಾರೆ ಎಂದ ಮಟ್ಟಾರು, ರಾಜ್ಯದಲ್ಲಿಸರ್ಕಾರದ ಧೋರಣೆಯ ವಿರುದ್ಧ, ಜನರಿಗೆ ರಕ್ಷಣೆ ನೀಡುವ ಪೊಲೀಸ್ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜನಸಾಮಾನ್ಯರನ್ನು ಸರ್ಕಾರ ಹೇಗೆ ರಕ್ಷಿಸುತ್ತದೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ರಾಜ್ಯದಲ್ಲಿ ಕ್ರಿಮಿನಲ್ ಗಳಿಗೆ ತಮ್ಮನ್ನು ರಕ್ಷಿಸಲು ಸರ್ಕಾರ ಇದೆ ಎಂಬ ದೈರ್ಯ ಬಂದಿದೆ. ಗೋಕಳ್ಳಸಾಗಾಣೆದಾರರನ್ನು ಹಿಡಿದರೇ ಪೊಲೀಸರಿಗೆ ಮಂತ್ರಿಗಳೇ ಫೋನ್ ಮಾಡಿ ಆರೋಪಿಗಳನ್ನು ಬಿಡುವಂತೆ ಹೇಳುತ್ತಾರೆ. ಆದ್ದರಿಂದ ಅಪರಾಧ ಘಟನೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ರಾಜ್ಯ ಕಾರ್ಯಕಾರಿ ಸದಸ್ಯೆ ಶ್ಯಾಮಲಾ ಕುಂದರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಯಶಪಾಲ್ ಸುವರ್ಣ, ಲಾಲಾಜಿ ಮೆಂಡನ್, ದಿನಕರ ಬಾಬು, ಪ್ರಭಾಕರ ಪೂಜಾರಿ, ಶೀಲಾ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಗೀತಾಂಜಲಿ ಸುವರ್ಣ, ಕಿರಣ್ ಕುಮಾರ್, ಹೆರ್ಗ ದಿನಕರ ಶೆಟ್ಟಿ, ಯಶಪಾಲ್ ಸುವರ್ಣ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್ ನಯನಾ, ಗಣೇಶ್, ಲಾಲಾಜಿ ಮೆಂಡನ್, ಉದಯಕುಮಾರ್ ಶೆಟ್ಟಿ ಮುಂತಾದವರಿದ್ದರು.
ಪ್ರತಿಭಟನೆಯಂಗವಾಗಿ ಬೃಹತ್ ಮಾನವ ಸರಪಳಿಯನ್ನು ರಚಿಸಿ, ರುದ್ರೇಶ್ ಕೊಲೆಯ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಯಿತು.
Discussion about this post