Read - 2 minutes
ಕಾನ್ಫುರ: ಸೆ:25; ರಕ್ಷಣಾತ್ಮಕ ಬ್ಯಾಟಿಂಗ್ ಬಲದಿಂದ ಮಿಂಚಿದ ಭಾರತ ಪ್ರವಾಸಿ ತಂಡದ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದೆ. ಹೀಗಾಗಿ ಐತಿಹಾಸಿಕ 500 ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆಗೆ ಗೆಲುವು ಒಲಿಯುವ ಸ್ಪಷ್ಟ ಲಕ್ಷಣ ತೋರುತ್ತಿದೆ.
ಇಲ್ಲಿನ ಗ್ರೀನ್ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ಕಿವಿಸ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 159ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತ 359 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಎರಡನೇ ವಿಕೆಟ್ಗೆ 133 ರನ್ಗಳ ಅಮೋಘ ಜತೆಯಾಟವಾಡಿದ್ದ ವಿಜಯ್ ಮತ್ತು ಚೇತೇಶ್ವರ್ ಪೂಜಾರ ಕಿವಿಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಭಾರತದ ಮೊತ್ತ 185ರನ್ ಆಗಿದ್ದಾಗ ಈ ಜೋಡಿ ಬೇರ್ಪಟ್ಟಿತು. ಮುರಳಿ ವಿಜಯ್ 76 ರನ್ ಗಳಿಸಿ ಸ್ನ್ಯಾಟರ್ ಬೌಲಿಂಗ್ನಲ್ಲಿ ಔಟಾದರು. ಇದಾದ ಬಳಿಕ ಮೊದಲ ಇನ್ನಿಂಗ್ಸ್ನಲ್ಲಿ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದರೂ ಕೇವಲ 18 ರನ್ ಗಳಿಸಿ ಮತ್ತೆ ವಿಫಲರಾದರು.
ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪೂಜಾರ 78 ರನ್ಗಳಿಸಿ ಶತಕದಿಂದ ವಂಚಿತರಾದರು. 68 ರನ್ ಅಂತರದಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ಮೆನ್ಗಳು ಪೆವಿಲಿಯನ್ ಕಡೆ ಮುಖ ಮಾಡಿದರು.
ಸ್ವಲ್ಪ ಆತಂಕಕ್ಕೊಳಗಾದ ಭಾರತ ತಂಡಕ್ಕೆ ರೋಹಿತ್ ಶರ್ಮ ಹಾಗೂ ರಹಾನೆ ಜೋಡಿಯು ಅರ್ಧಶತಕದ ಜತೆಯಾಟವಾಡಿ ಆಸರೆಯಾದರು.
ಮೊದಲ ಇನ್ನಿಂಗ್ಸ್ನಲ್ಲಿ ಕಿವಿಸ್ ಸ್ಪಿನ್ ಬೌಲರ್ಗಳು ಭಾರತ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಇದನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ದಿಟ್ಟ ಉತ್ತರ ನೀಡಿತು.
ಮಧ್ಯಾಹ್ನದ ವೇಳೆಗೆ ಭಾರತದ 5 ವಿಕೆಟ್ ನಷ್ಟಕ್ಕೆ 303 ರನ್ಗಳಿಸಿತ್ತು. ಅಜಿಂಕೆ ರಹಾನೆ 40 ರನ್ಗಳಿಸಿ ಔಟಾದರು. ರೋಹಿತ್ ಶರ್ಮ ಔಟಾಗದೆ 25 ಹಾಗೂ ರವೀಂದ್ರ ಜಡೇಜ ಔಟಾಗದೆ 3 ರನ್ ಗಳಿಸಿ ಕ್ರೀಸ್ನಲ್ಲಿದ್ದರು.
ನಾಳೆ ಅಂತಿಮ ದಿನವಾದ್ದರಿಂದ ಭಾರತ ಬೇಗ ಇನ್ನಿಂಗ್ಸ್ ಡಿಕ್ಲೈರ್ ಮಾಡಿಕೊಂಡು ಪ್ರವಾಸಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರೆ ಕೋಹ್ಲಿ ಪಡೆಗೆ 500ನೇ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗೆಲುವು ಸಾಧಿಸಬಹುದು.
ಶತಕ ಕನಸು ಭಗ್ನ!
ಟೆಸ್ಟ್ ನಾಯಕ ನಾಗಿ ಸ್ವದೇಶದಲ್ಲಿ ಶತಕ ಗಳಿಸಬೇಕೆಂಬ ವಿರಾಟ್ ಕೊಹ್ಲಿ ಅವರ ಕನಸು ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲೂ ಕೂಡ ಕೈಗೂಡಲಿಲ್ಲ.
ನ್ಯೂಜಿಲೆಂಡ್ನ ಎರಡೂ ಇನ್ನಿಂಗ್ಸ್ನಲ್ಲೂ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 9 ಹಾಗೂ 18 ರನ್ಗಳಿಗೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿರುವುದೇ ಅಲ್ಲದೆ ಸ್ವದೇಶದಲ್ಲಿ ಶತಕ ಗಳಿಸಬೇಕೆಂಬ ಅವರ ಆಸೆಗೂ ತಣ್ಣೀರೆರಚಿದೆ.
ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸರಣಿ ಜಯ ಸಾಧಿಸಿದ್ದರೂ ಕೂಡ ನಾಯಕನಾದ ನಂತರ ವಿರಾಟ್ ಕೊಹ್ಲಿ ಸ್ವದೇಶದಲ್ಲಿ ಶತಕ ಗಳಿಸದಿರುವುದು ಮಾತ್ರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ನಾಯಕನಾದ ನಂತರ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 88 ರನ್ ಗಳಿಸಿದ್ದು ಗರಿಷ್ಠ ರನ್ಆಗಿದೆ.
ನವದೆಹಲಿಯ ಸ್ಟೈಲಿಷ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 12 ಶತಕಗಳನ್ನು ಗಳಿಸಿದ್ದು ಸ್ವದೇಶದಲ್ಲಿ ಬೆಂಗಳೂರು (103), ನಾಗ್ಪುರ (103), ಚೆನ್ನೈ (107) ಮೈದಾನದಲ್ಲಿ ಶತಕ ಗಳಿಸಿದ್ದರೂ ಕೂಡ ನಾಯಕನಾಗಿ ಶತಕ ಗಳಿಸಬೇಕೆಂಬ ವಿರಾಟ್ ಕೊಹ್ಲಿಯ ಕಾತರ ಆಗೆಯೇ ಉಳಿದಿದೆ.
Discussion about this post