ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಂಗಳವಾರ ಮುಂಜಾನೆಯ ಉಕ್ಕಿನ ನಗರಿಯ ಮಂದಿಗೆ ಕೊರೋನಾ ಶಾಕ್ ಕೊಟ್ಟಿದ್ದು, ನಗರದಲ್ಲಿ ಇಂದು ಬರೋಬ್ಬರಿ ಏಳು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಗಾಂಧಿನಗರದಲ್ಲಿ ಐವರಿಗೆ ಇಂದು ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಮೊದಲಿಯಾರ್ ಸಮುದಾಯ ಭವನಕ್ಕೆ ತೆರಳುವ ಮುಖ್ಯರಸ್ತೆ ಹಾಗೂ ಪಕ್ಕದ ರಸ್ತೆಯಲ್ಲಿ ಇಂದು ಮುಂಜಾನೆ ಸೀಲ್ ಡೌನ್ ಮಾಡಲಾಗಿದೆ.
ಇನ್ನು, ಸುಭಾಷ್ ನಗರದಲ್ಲಿ ಎರಡು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮೂರು ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, ಗಾಂಧಿ ನಗರದ ಮೊದಲಿಯಾರ್ ಸಮುದಾಯ ಭವನದ ರಸ್ತೆಯಲ್ಲಿ ಐದು ಮಂದಿಗೆ ಪಾಸಿಟಿವ್ ಬಂದಿದೆ. ಇವರುಗಳ ಟ್ರಾವೆಲ್ ಹಿಸ್ಟರಿ ಇನ್ನೂ ದೊರೆತಿಲ್ಲ. ಈ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಇನ್ನು, ಹೊಸಮನೆಯ ಸುಭಾಷ್ ನಗರದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದ್ದು, ತಮಿಳುನಾಡು ಟ್ರಾವೆಲ್ ಹಿಸ್ಟರಿ ಇದೆ. ತಮ್ಮ ಗರ್ಭಿಣಿ ಸೊಸೆ ಹೆರಿಗೆ ಸಂದರ್ಭದಲ್ಲಿ ತಮಿಳುನಾಡಿಗೆ ತೆರಳಿದ್ದು, ನಾಲ್ಕೈದು ದಿನಗಳ ಹಿಂದೆ ನಗರಕ್ಕೆ ಮರಳಿದ 56 ವರ್ಷದ ಪುರುಷ, 48 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ. ಈ ಕುಟುಂಬದಲ್ಲಿ ಒಟ್ಟು ಐವರಿದ್ದು, ನಾಲ್ವರಿದ್ದು, ಇನ್ನೂ ಇಬ್ಬರು ವರದಿ ಬರಬೇಕಿದೆ. ಇನ್ನೊಬ್ಬ ಹುಡುಗನನ್ನು ಪರೀಕ್ಷೆಗಾಗಿ ಇಂದು ಕಳುಹಿಸಲಾಗುತ್ತದೆ ಎಂದರು.
ನಗರದಲ್ಲಿ ಒಟ್ಟು ಎರಡು ಬಡಾವಣೆಯ ಐದು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಯಾರಾದರೂ ಓಡಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಉಪ್ಪಾರ ಕೇರಿಯಲ್ಲಿ ಪಾಸಿಟಿವ್ ಬಂದ ವ್ಯಕ್ತಿಯ ಸಂಪರ್ಕದಿಂದ ಗಾಂಧಿ ನಗರದ ಐವರಿಗೆ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಇನ್ನು ದೃಢಪಟ್ಟಿಲ್ಲ ಎಂದು ಆಯುಕ್ತ ಮನೋಹರ್ ತಿಳಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post