Read - < 1 minute
ಬೆಂಗಳೂರು, ಅ.10: ರಾಯಚೂರಿನಲ್ಲಿ ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.
ನವದೆಹಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಣಿ ಸಭೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದ ಭಾಗವಹಿಸಿದ್ದರು.
ಡಿಸೆಂಬರ್ 2 ರಿಂದ 4ರವರೆಗೆ ರಾಯಚೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ರಾಯಚೂರು ಅಥವಾ ಹೈದರಾಬಾದ್ ಕರ್ನಾಟಕ ಭಾಗದವರು ಅಧ್ಯಕ್ಷರಾಗೋ ನಿರೀಕ್ಷೆಯಿತ್ತು. ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಸಾಹಿತಿಗಳಾದ ಜಂಬಣ್ಣ ಅಮರಚಿಂತ, ರಾಜಶೇಕರ್, ಚನ್ನಣ್ಣ ವಾಲಿಕಾರ್, ಪಂಚಾಕ್ಷರಿ ಹಿರೇಮಠ್, ಕೆಪಿ ಜಟ್ಟಿ ಹೆಸರುಗಳಿದ್ದವು. ಆದರೆ ಅಂತಿಮವಾಗಿ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
1946ರ ಅ.16ರಂದು ತುಮಕೂರು ಜಿಲ್ಲೆ ಬರಗೂರು ಗ್ರಾಮದಲ್ಲಿ ಜನಿಸಿದ ರಾಮಚಂದ್ರಪ್ಪ ಅವರು ತುಮಕೂರಿನಲ್ಲಿ ಬಿ.ಎ. ವಿದ್ಯಾಭ್ಯಾಸ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇರಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕರಾಗಿ, ಕೇಂದ್ರದ ಬೆಳವಣಿಗೆಗೆ ಕಾರಣಕರ್ತರಾಗಿ, ಸುಮಾರು ವರ್ಷ ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದು ಸ್ವಯಂ ನಿವೃತ್ತರು. ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ರಾಜ್ಯ ಸಂಚಾಲಕರಾಗಿ ಬಂಡಾಯದ ಮುಂಚೂಣಿ ಲೇಖಕರು.
ಕಾವ್ಯ, ಕತೆ, ಕಾದಂಬರಿ ಕ್ಷೇತ್ರಗಳಲ್ಲಿ ಸಾಕಷ್ಟು ಕೃಷಿ ಮಾಡಿರುವಂತೆ ಸ್ವತಂತ್ರ ಚಿಂತನೆಯ ವಿಮರ್ಶಕರು. ಚಲನಚಿತ್ರ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಅಂತರ್ರಾಷ್ಟ್ರೀಯ ಮನ್ನಣೆಗೂ ಪಾತ್ರರಾಗಿದ್ದಾರೆ. ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರ ರಚಿಸಿದ್ದ ಸಾಂಸ್ಕೃತಿಕ ನೀತಿ ರಚನೆಯ ಸಮಿತಿ ಅಧ್ಯಕ್ಷರಾಗಿದ್ದರು. ಬರಗೂರು ನಿರ್ದೇಶನದ ಏಕ ಪಾತ್ರಾಭಿನಯದ ಶಾಂತಿ ಚಿತ್ರ ಗಿನ್ನೆಸ್ ದಾಖೆಲೆಗೆ ಸೇರಿದೆ.
ಸಾಹಿತ್ಯ ರಂಗದಿಂದಲೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಂಬೇಡ್ಕರ್ ಪ್ರಶಸ್ತಿ, ಡಾ. ಸಾ.ಶಿ. ಮರುಳಯ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾರ್ ನುಡಿ ಸಿರಿಯ ಅಧ್ಯಕ್ಷತೆ, ಕುವೆಂಪು ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
Discussion about this post