ಕಲ್ಪ ಮೀಡಿಯಾ ಹೌಸ್ | ಕೊಲೊಂಬೊ |
ಸಸ್ಯಾಹಾರಿ ಪ್ರಯಾಣಿಕನೊಬ್ಬನಿಗೆ ಮಾಂಸಾಹಾರಿ ಊಟ ನೀಡಿ, ಅದನ್ನು ಸೇವಿಸಿದ ನಂತರ 85 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಕತಾರ್ ಏರ್ ವೇಸ್ ವಿಮಾನದಲ್ಲಿ ನಡೆದಿದೆ.
ಮೃತ ವೃದ್ಧರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ನಿವೃತ್ತ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ ಮೃತಪಟ್ಟ ಪ್ರಯಾಣಿಕ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಡಾ. ಅಶೋಕ ಜಯವೀರ ಅವರು ಲಾಸ್ ಏಂಜಲೀಸ್’ನಿಂದ ಕೊಲಂಬೋಗೆ ಕತಾರ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಸಿದ್ದರು. ವಿಮಾನದಲ್ಲಿ ಸಸ್ಯಹಾರಿ ಊಟವನ್ನು ಆರ್ಡರ್ ಮಾಡಿದ್ದರು. ಆದರೆ, ಸಸ್ಯಹಾರಿ ಊಟ ಲಭ್ಯವಿಲ್ಲ ಎಂದು ತಿಳಿಸಿದ ಸಿಬ್ಬಂದಿ ಮಾಂಸಹಾರ ಊಟವನ್ನೇ ತಂದುಕೊಟ್ಟರು.
ಆದರೆ, ತಿನ್ನಲು ನಿರಾಕರಿಸಿದ ಅಶೋಕ ಅವರಿಗೆ ಅನಿವಾರ್ಯವಾಗಿ ಅದನ್ನೇ ಸೇವಿಸುವಂತೆ ಸಹ ಪ್ರಯಾಣಿಕರು ಸಲಹೆ ನೀಡಿದರು.
ಹಸಿವು ತಾಳಲಾರದೇ ಮಾಂಸಾಹಾರ ಊಟವನ್ನೇ ಸೇವಿಸಲು ಆರಂಭಿಸಿದರು. ಆದರೆ, ಊಟ ಆರಂಭಿಸಿದ ಕೆಲವೇ ಸೆಕೆಂಡ್’ಗಳಲ್ಲಿ ಉಸಿರು ಕಟ್ಟಿ ಪ್ರಜ್ಞೆ ಕಳೆದುಕೊಂಡರು.
ತಕ್ಷಣವೇ ಎಚ್ಚೆತ್ತ ಸಹಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಎಚ್ಚರಿಸಿ, ಉಪಚರಿಸಲು ಯತ್ನಿಸಿದ್ದಾರೆ. ಆದರೆ, ಪ್ರಯಾಣಿಕನ ಸ್ಥಿತಿ ಹದಗೆಟ್ಟಿತ್ತು. ವಿಮಾನವು ಅಂತಿಮವಾಗಿ ಸ್ಕಾಟ್ಲೆಂಡ್ ಎಡಿನ್ಬರ್ಗ್’ನಲ್ಲಿ ಇಳಿಯಿತು.
ಅಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನಿಸಿದರೂ, ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರು ಆಸ್ಪಿರೇಷನ್ನ್ಯು ಮೋನಿಯಾದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಮೃತ ಪ್ರಯಾಣಿಕನ ಪುತ್ರ ಕತಾರ್ ಏರ್ವೇಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಊಟ ಮತ್ತು ವೈದ್ಯಕೀಯ ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದ್ದಾರೆ.
ಮೊದಲೇ ಸಸ್ಯಾಹಾರ ಊಟವನ್ನು ಆರ್ಡರ್ ಮಾಡಿದ್ದರೂ, ವಿಮಾನಯಾನ ಸಂಸ್ಥೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದು, ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post