ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಜ್ಯ ಸರ್ಕಾರ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಕೈಗೊಂಡಿರುವ ಕ್ರಮಗಳ ಪೈಕಿ ಶಂಕಿತ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಗಳ ಕೈಗೆ ಮುದ್ರೆಯನ್ನು ಒತ್ತಿದೆ. ಅವರಿಗೆ 14 ದಿನಗಳ ಕಾಲ ಮನೆಯಲ್ಲಿಯೇ ಯಾರ ಸಂಪರ್ಕದಲ್ಲಿಯೂ ಇರದಂತೆ ಪ್ರತ್ಯೇಕವಾಗಿರಬೇಕೆಂದು ಹೇಳಿದರೂಸಹ ಅನೇಕರು ಈ ನಿಯಮವನ್ನು ಉಲ್ಲಂಘಿಸಿ ರಸ್ತೆ, ಹೋಟೆಲ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಊರಿಂದೂರಿಗೆ ಸಂಚರಿಸುತ್ತಾ ಸ್ವೇಚ್ಛಾಚಾರ ಪ್ರವೃತ್ತಿ ನಡೆಸುತ್ತಿರುವುದರಿಂದ ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಲು ಕಾರಣವಾಗಿದೆ.
ಎರಡನೆಯದಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಎಲ್ಲಾ ವ್ಯಾಪಾರ ವಹಿವಾಟನ್ನು ಬಸ್, ರೈಲು, ಇತರೆ ವಾಹನಗಳ ಸಂಚಾರ ಎಲ್ಲವನ್ನೂ ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿ ರಾಜ್ಯವನ್ನು ಲಾಕ್’ಡೌನ್ ಮಾಡಿ ಆದೇಶ ಹೊರಿಸಲು ನಿರ್ಧರಿಸಿ ಸಾರ್ವಜನಿಕರು ಮನೆಬಿಟ್ಟು ಹೊರಗೆ ಬಾರದಂತೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ. ಒಂದೊಮ್ಮೆ ಸರ್ಕಾರದ ಈ ಆದೇಶವನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಇಂಡಿಯನ್ ಪಿನಲ್ ಕೋಡ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಹೂಡುವ ಸಿದ್ಧತೆ ನಡೆಸಿದೆ.
ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಜವಾಬ್ದಾರಿಯುತ ನಾಗರಿಕರಾಗಿ ಪ್ರತಿಯೊಬ್ಬ ಪ್ರಜೆಯೂ ಸ್ಪಂದಿಸಿ ನಡೆದುಕೊಳ್ಳಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ. ಈಗಾಗಲೇ ಕೆಲವರು ಮಾಡಿದ ತಪ್ಪಿಗೆ ಅಸಂಖ್ಯಾತ ಅಮಾಯಕರು ಈ ರೋಗದಿಂದ ಬಳಲುವಂತಾಗಿ ಕೆಲವು ಮುಗ್ಧಜೀವಗಳು ಬಲಿಯಾಗಿವೆ.
ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಮಾರಕ ರೋಗ ಕೊರೋನಾ ವಿರುದ್ಧ ಹಗಲಿರುಳೆನ್ನದೆ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದರ ಪರಿವೆಯಿಲ್ಲದೆ ಕೆಲವರು ಸರ್ಕಾರದ ಅದೇಶವನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಓಡಾಡುವ ದಾರ್ಷ್ಟ್ಯವನ್ನು ಪ್ರದಶಿಸುತ್ತಿರುವುದರಿಂದ ಕೊರೋನಾ ರೋಗ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಹಿನ್ನೆಡೆಯುಂಟಾಗುವ ಸಾಧ್ಯತೆಯಿರುವುದರಿಂದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ವ್ಯಕ್ತಿಗಳ ವಿರುದ್ದವಾಗಿ ಸರ್ಕಾರ ಐಪಿಸಿ ಸೆಕ್ಷನ್ 188, 269, 270 ಮತ್ತು 271ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.
ಒಂದೊಮ್ಮೆ ಯಾವುದೇ ವ್ಯಕ್ತಿಗಳು ರಾಜ್ಯ ಲಾಕ್ ಡೌನ್ ಆದ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಸಾರ್ವಜನಿಕವಾಗಿ ಸ್ವೇಚ್ಛಾಚಾರದಿಂದ ಸಂಚರಿಸಿದರೆ ಅಂತಹವರ ಮೇಲೆ ಈ ಕೆಳಕಂಡ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದರೆ ಅಂತಹ ವ್ಯಕ್ತಿಗಳು ದಂಡ ಅಥವಾ ಸೆರೆವಾಸ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಂತಹ ಕಲಂಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ.
1)ಐಪಿಸಿ ಕಲಂ 188 ಲೋಕ ನೌಕರನು ವಿದ್ಯುಕ್ತವಾಗಿ ಪ್ರಸ್ಥಾಪಿಸಿದ ಆದೇಶದ ಉಲ್ಲಂಘನೆ (Disobedience to order duly promulgated by public servant) ಸರ್ಕಾರ ಯಾವುದೇ ಕೃತ್ಯವನ್ನು ನಿರ್ದಿಷ್ಠವಾಗಿ ಮಾಡಬಾರದೆಂದು ಉಧ್ಘೋಷಿಸಿದ್ದರೂ ಸಹ ಅದನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿ ನಡೆದುಕೊಂಡರೆ ಆತನ ಅಂತಹ ಕೃತ್ಯದಿಂದ ಯವುದೇ ಮನುಷ್ಯನ ಪ್ರಾಣ, ಆರೋಗ್ಯ ಅಥವಾ ಸುರಕ್ಷತೆಗೆ ಅಪಾಯ ಉಂಟಾದರೆ ಅದು ಈಕಲಂ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಪ್ರಸ್ತುತ ಕೊರೋನಾ ರೋಗದ ವೈರಸ್ ಹರಡದಂತೆ ತಡೆಯಲು ಸರ್ಕಾರ ಸಾರ್ವಜನಿಕವಾದ ರಸ್ತೆಯಲ್ಲಿ ನಾಗರಿಕರ ಸಂಚಾರ ನಿರ್ಬಂಧಿಸಿದಾಗ ಅದನ್ನು ಉಲ್ಲಂಘಿಸಿ ಸಂಚರಿಸಿದರೆ ಅದರಿಂದ ಸೋಂಕು ಹರಡುವಂತಾದರೆ ಆಂತಹ ವ್ಯಕ್ತಿಗಳ ಕೃತ್ಯ ಈ ಕಲಂ ಅಡಿಯಲ್ಲಿ ಅಪರಾಧವಗಿದ್ದು ಅಂತಹವರಿಗೆ 6 ತಿಂಗಳ ಸೆರೆವಾಸ ಶಿಕ್ಷೆ ಅಥವಾ 2 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.
2)ಐಪಿಸಿ ಕಲಂ 269 ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಕನ್ನು ಹರಡುವ ಸಂಭವವಿರುವ ನಿರ್ಲಕ್ಷ್ಯ ಕೃತ್ಯ (Negligent Act Likely to spread infection of Disease dangerous to health).
ಯಾವುದೇ ವ್ಯಕ್ತಿಯು ಪ್ರಾಣಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವ ಸಂಭವವಿರುವ ಮತ್ತು ಹಾಗೆಂದು ತಿಳಿದಿರುವ ಅಥವಾ ಆ ರೀತಿ ನಂಬಲು ಕಾರಣವಿರುವ ಯಾವದೇ ಕೃತ್ಯವನ್ನು ಕಾನೂನಿಗೆ ವಿರುದ್ಧವಾಗಿ ಅಥವ ನಿರ್ಲಕ್ಷ್ಯದಿಂದ ಮಾಡಿದರೆ ಅಂತಹ ವ್ಯಕ್ತಿಯ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿದ್ದು ಆತನಿಗೆ 6ತಿಂಗಳ ಸೆರೆವಾಸದ ಶಿಕ್ಷೆ ಅಥವ ದಂಡ ಅಥವ ಎರಡನ್ನೂ ವಿಧಿಸಲಾಗುತ್ತದೆ.
3)ಐಪಿಸಿಕಲಂ 270 ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಕನ್ನು ಹರಡುವ ಸಂಭವ ವಿರುವ ದ್ವೇಷಪೂರ್ವಕ ಕೃತ್ಯ (Malignant act Likely to spread infection of disease dangerous to Life).
ಯಾವುದೇ ವ್ಯಕ್ತಿಯು ಪ್ರಾಣಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವ ಸಂಭವವಿರುವ ಮತ್ತು ಹಾಗೆಂದು ತಿಳಿದಿರುವ ಅಥವಾ ಆ ರೀತಿ ನಂಬಲು ಕಾರಣವಿರುವ ಯಾವುದೇ ಕೃತ್ಯವನ್ನು ದ್ವೇಷ ಪೂರ್ವಕವಾಗಿ ಮಾಡಿದರೆ ಅಂತಹ ವ್ಯಕ್ತಿಯು ಶಿಕ್ಷಾರ್ಹ ಅಪರಾಧಿಯಾಗಿದ್ದು ಅಂತಹ ವ್ಯಕ್ತಿಗೆ 2 ವರ್ಷ ಕಾಲ ಜೈಲುವಾಸ ಅಥವಾ ಜುಲ್ಮಾನ ಅಥವಾ ಎರಡನ್ನೂ ವಿಧಿಸಬಹುದಾಗಿರುತ್ತದೆ.
4)ಐಪಿಸಿ ಕಲಂ270 ರೋಗನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸುವುದು. (Disobideience to Quarntain rlue).
ಯಾವುದೇ ನೌಕೆಯನ್ನು ರೋಗ ನಿರೋಧಕ ನಿರ್ಬಂಧದ ಸ್ಥಿತಿಯಲ್ಲಿ ಇರಿಸಲು ಅಥವಾ ತೀರ ಪ್ರದೇಶದೊಂದಿಗೆ ಅಥವಾ ಇತರ ನೌಕೆಗಳೊಂದಿಗೆ ರೋಗ ನಿರೋಧಕ ರೋಗ ನಿರ್ಭಂಧದ ಸ್ಥಿಯಲ್ಲಿರುವ ನೌಕೆಗಳ ಸಂಪರ್ಕವನ್ನು ವಿನಿಮಯಗೊಳಿಲು ಅಥವಾ ಒಂದು ಸೋಂಕು ರೋಗವು ಇರುವ ಸ್ಥಳಗಳಿಗೂ ಇತರ ಸ್ಥಳಗಳಿಗೂ ನಡಡುವೆ ಸಂಪರ್ಕವನ್ನು ತುಂಡರಿಸಲು ಸರ್ಕಾರವು ರಚಿಸಿ ಉದ್ಘೋಷಿಸಿರುವ ಯಾವುದೇ ನಿಯಮವನ್ನು ಯಾವನೇ ವ್ಯಕ್ತಿಯು ತಿಳಿದೂ ಸಹ ಉಲ್ಲಂಘಿಸಿದರೆ ಅಂತಹ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ ಅಥವಾ ಜುಲ್ಮಾನಾ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಪ್ರಸ್ತುತ ಕೊರೋನಾ ರೋಗದ ವೈರಸ್ ಎಲ್ಲೆಡೆ ಹರಡದಂತೆ ಸರ್ಕಾರ ಕೈಗೊಂಡಿರುವ ನಿರ್ಧಾರಗಳಿಗೆ ನಾಗರಿಕರು ಸಹಕರಿಸಿ ಆ ಆದೇಶದಂತೆ ನಡೆದುಕೊಳ್ಳಬೇಕು. ಒಂದೊಮ್ಮೆ ಈ ನಿಯಮ ಯಾರೇ ಉಲ್ಲಂಘಿಸಿದರೂ ಸಹ ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಐಪಿಸಿಯಲ್ಲಿ ಈ ಮೇಲೆ ಹೇಳಿದ ಕಲಂ ಅಡಿಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಜವಾಬ್ದಾರಿಯುತ ನಾಗರಿಕರಾಗಿ ನಾವೆಲ್ಲರೂ ಸರ್ಕಾರದ ನಿರ್ಧಾರದೊಂದಿಗೆ ಕೈಜೋಡಿಸಿ ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ಭಾಗಿಯಾಗೋಣ.
ಲೇಖನ: ಕೆ.ಎಸ್.ಸುಧೀಂದ್ರ, ನ್ಯಾಯವಾದಿಗಳು, ಭದ್ರಾವತಿ
Get in Touch With Us info@kalpa.news Whatsapp: 9481252093
Discussion about this post