ನವದೆಹಲಿ: 2018ನೆಯ ಇಸವಿಯ ಒಂದೇ ವರ್ಷದಲ್ಲಿ ಸಿಎಪಿಎಫ್’ಗೆ ಸೇರಿದ 96 ಯೋಧರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಬಹಿರಂಗ ಪಡಿಸಿದೆ.
ಈ ಕುರಿತಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದು, 2018ನೆಯ ಇಸವಿಯಲ್ಲಿ ವಿವಿಧ ಕಾರಣಗಳಿಗಾಗಿ 96 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ರೀತಿ 2016ನೆಯ ಇಸವಿಯಲ್ಲಿ 90 ಯೋಧರು ಹಾಗೂ 2017ರಲ್ಲಿ 121 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಿಎಪಿಎಫ್’ನ ಯೋಧರ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ಅಗತ್ಯವಿರುವ ವಿಚಾರಗಳನ್ನು ಸಚಿವಾಲಯದ ಗಮನಕ್ಕೆ ತಂದರೆ ಅದಕ್ಕೆ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅಲ್ಲದೇ ಈ ಯೋಧರ ಸಮಸ್ಯೆಯನ್ನು ವೃತ್ತಿಪರ ಸಂಸ್ಥೆಗಳೊಂದಿಗೆ ಸಮಾಲೋಚನೆಯಲ್ಲಿ ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ ಮತ್ತು ಬ್ಯೂರೊ ಆಫ್ ಪೋಲಿಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ (ಬಿಪಿಆರ್ & ಡಿ) ಒತ್ತಡವನ್ನು ಉಂಟುಮಾಡುವ ಅಂಶಗಳ ಬಗ್ಗೆ ಅಧ್ಯಯನ ನಡೆಸಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಯೋಧರ ಕೆಲಸದ ಒತ್ತಡವನ್ನು ಪರಿಶೀಲಿಸುವುದು ಮತ್ತು ಆತ್ಮಹತ್ಯೆಯನ್ನು ನಿಗ್ರಹಿಸುವ ಕ್ರಮಗಳು ಸಂಬಂಧಪಟ್ಟ ಸಿಬ್ಬಂದಿ ಸೂಕ್ಷ್ಮ ಮತ್ತು ಬೇಡಿಕೆ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ನಂತರ ಆಯ್ಕೆ ಪೋಸ್ಟಿಂಗ್’ಗಳನ್ನು ಸಾಧ್ಯವಾದಷ್ಟು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

















