ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನನ್ನ ಸಾಮಾಜಿಕ ಹಾಗೂ ರಾಜಕೀಯ ಜೀವನಕ್ಕೆ ಆರಂಭಕ್ಕೆ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರುಗಳ ಜೀವನವೇ ನನಗೆ ಪ್ರೇರಕವಾಗಿದೆ ಎಂದುದ ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ನಂತರ ಅವರು ಮಾತನಾಡಿದರು.
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗಿದ್ದ ಭಾರತ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತಿಯತ್ತ ಸಾಗುತ್ತಿದೆ. ಮೋದಿಯವರ ನಾಯಕತ್ವದಲ್ಲಿ ದೇಶದ ಮೂಲಭೂತ ಸೌಕರ್ಯ, ಶಿಕ್ಷಣ, ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ, ಸೇನೆಯ ಆಧುನೀಕರಣ ಸೇರಿದಂತೆ ಎಲ್ಲ ವರ್ಗಗಳ ಸಮಗ್ರ ಅಭಿವೃದ್ಧಿಯಾಗುತ್ತಿದೆ. ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗುವುದು ನಿಶ್ಚಿತ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ರಾಜ್ಯದ ಮಟ್ಟಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಪ್ರೇರಕ ಶಕ್ತಿಯಾಗಿದ್ದು, ಅವರ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳು ಅವರ ರಾಜಕೀಯ ಹಾಗೂ ಸಾಮಾಜಿಕ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಶಿವಮೊಗ್ಗಕ್ಕಿಂತಲೂ ದಾವಣಗೆರೆ ದೊಡ್ಡ ನಗರವಾಗಿದ್ದರೂ, ಅಭಿವೃದ್ಧಿಯಲ್ಲಿ ಶಿವಮೊಗ್ಗವೇ ಮುಂದಿದೆ. ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದರು.
ದೇಶದ ಅಭಿವೃದ್ಧಿಗೆ ಅಳಿಲು ಸೇವೆ ಮಾಡುವ ಉದ್ದೇಶದಿಂದ ಅತ್ಯಂತ ತುಂಬು ಮನಸ್ಸಿನಿಂದ ಇಂದು ಬಿಜೆಪಿಯನ್ನು ನಾನು ಸೇರ್ಪಡೆಗೊಂಡಿದ್ದು, ಪಕ್ಷದ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇವೆ. ಪಕ್ಷದ ಹಿರಿಯರು ನನಗೆ ಮಾರ್ಗದರ್ಶನ ಮಾಡಿ, ನನಗೆ ನೀಡುವ ಯಾವುದೇ ಜವಾಬ್ದಾರಿಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದ ಕುಡಿಯಾಗಿ ಸರ್ಜಿ ರುದ್ರಪ್ಪ ಹಾಗೂ ರೇಣುಕಾ ಸರ್ಜಿ ಅವರು ಪುತ್ರನಾಗಿ ಜನಿಸಿದ್ದು ನನ್ನ ಪುಣ್ಯ. ನಾನು ಸಣ್ಣ ವಯಸ್ಸಿನಲ್ಲಿದ್ದಾಗ ನಮ್ಮಲ್ಲಿನ ಕೆಲಸಗಾರರು ಹಾಗೂ ಅಡಿಕೆ ಸುಲಿಯುವ ತಾಯಂದಿರು ನನ್ನನ್ನು ಆಡಿಸಿ ಬೆಳೆಸಿದ್ದಾರೆ. ಮಕ್ಕಳ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಮಣಿಪಾಲ್’ನಲ್ಲಿ ಅದನ್ನೇ ಓದಿಕೊಂಡು ಕಳೆದ ಎರಡು ದಶಕದಲ್ಲಿ ಲಕ್ಷಾಂತರ ಮಕ್ಕಳ ಸೇವೆ ಮಾಡುವ ಪ್ರಯತ್ನ ಮಾಡಿದ್ದೇನೆ. ಆ ಎಲ್ಲ ಮಕ್ಕಳ ತಾಯಂದಿರ ಆರ್ಶೀವಾದ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರು.
ಮಕ್ಕಳು ಹಾಗೂ ತಾಯಂದಿರ ಸೇವೆಯ ಪುಣ್ಯದಿಂದ 8 ವರ್ಷದ ಅವಧಿಯಲ್ಲಿ ಆರು ಯುನಿಟ್, 256 ಬೆಡ್ ಆಸ್ಪತ್ರೆ, 80ಕ್ಕೂ ಅಧಿಕ ವೈದ್ಯರು ಹಾಗೂ 850 ಕ್ಕೂ ಅಧಿಕ ಸಿಬ್ಬಂದಿಗಳ ನಮ್ಮ ಆಸ್ಪತ್ರೆ ಹೊಂದಿದೆ. ಅಲ್ಲದೇ, ಲಕ್ಷಾಂತರ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವ ಭಾಗ್ಯ ಒದಗಿದೆ ಎಂದರು.
ನನಗೆ 10 ವರ್ಷ ಇದ್ದಾಗಲೇ ಪಟ್ಟಾಭಿರಾಮ್, ದಿನೇಶ್ ಪೈ ಸೇರಿದಂತೆ ಹಲವು ಹಿರಿಯ ಮಾರ್ಗದರ್ಶನದಲ್ಲಿ ಶಾಖೆಗೆ ಹೋಗುತ್ತಿದ್ದೆ. ಇವರುಗಳ ಗರಡಿಯಲ್ಲಿ ಆಗಿನಿಂದಲೇ ನಿಸ್ವಾರ್ಥ ದೇಶಪ್ರೇಮ ನನ್ನಲ್ಲಿ ಮೂಡಿತ್ತು. ಇದರಿಂದಲೇ ನಮಗೆ ಈ ಒಳ್ಳೆಯ ಸಂಸ್ಕಾರ ಬರಲು ಕಾರಣವಾಯಿತು. ಮಹಾತ್ಮರ ಪ್ರೇರಣೆಯಿಂದ ಸೇವೆ ಹಾಗೂ ಇಂದು ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು, ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದ ಪ್ರಶಾಂತ್ ನಾಯಕ್, ಮಕ್ಕಳ ತಜ್ಞ ಡಾ.ಪ್ರದೀಪ್, ಕರಾಟೆ ಪಟು ವಿನೋದ್ ಹಾಗೂ ಹಲವು ಪ್ರಮುಖರು, ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post