ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿದ್ದೇಶ್ವರ ಶ್ರೀಗಳನ್ನು ಕಳೆದುಕೊಂಡು ಇಡೀ ದೇಶ ಬಡವಾಗಿದೆ. ಸರಳತೆಯ ಸಂತ ನಡೆದಾಡುವ ದೇವರನ್ನು ಕಳೆದುಕೊಂಡಿದ್ದೇವೆ. ನಮ್ಮ ಜೀವನದಲ್ಲಿ ಅವರ ತತ್ವ ಸಿದ್ಧಾಂತದ 0.1 ಶೇ.ವನ್ನಾದರೂ ಅಳವಡಿಸಿಕೊಳ್ಳೋಣ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ಅವರು ಇಂದು ನಗರದ ಬಿಜೆಪಿ ಕಛೇರಿಯಲ್ಲಿ ದಿ.ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಿ ನುಡಿ ನಮನ ಸಲ್ಲಿಸಿದರು.
1992ರಲ್ಲಿ ನಾನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿದ್ದಾಗ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಹೋಗಿದ್ದೆ. ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಅವರ ಪ್ರವಚನ ಪ್ರಾರಂಭವಾಗಿ 7 ಗಂಟೆಗೆ ಮುಗಿಯುತ್ತದೆ. ದೊಡ್ಡ ಮೈದಾನದಲ್ಲಿ ಯಾವುದೆ ಪ್ರಚಾರ ಮಾಡದೆ ಸಾವಿರಾರು ಭಕ್ತರು ಸೇರಿದ್ದರು. ಇಡೀ ವಾತಾವರಣದಲ್ಲಿ ಒಂದು ಗಂಟೆ ಕಾಲ ಪಿನ್‌ಡ್ರಾಪ್ ಸೈಲೆನ್ಸ್ ಇತ್ತು. ಅವರ ಪ್ರವಚನವನ್ನು ಶಿವಮೊಗ್ಗಕ್ಕೆ ಶ್ರೀಗಂಧ ಸಂಸ್ಥೆಯ ಮೂಲಕ ಉಣಬಡಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅದಕ್ಕು ಮುನ್ನ ಪ್ರವಚನಕ್ಕೆ ಬರಲು ಆಹ್ವಾನಿಸಿದಾಗ ಅದಾಗಲೇ 3 ವರ್ಷಗಳ ಕಾಲ ಎಲ್ಲಾ ದಿನಗಳು ಮೊದಲೇ ಕಾಯ್ದಿರಿಸಲಾಗಿತ್ತು. ಅದೃಷ್ಟವಶಾತ್ ಒಂದು ವಾರದ ಪ್ರವಚನ ರದ್ಧಾಗಿದ್ದ ಕಾರಣ ಆ ಭಾಗ್ಯ ನಮ್ಮ ಶಿವಮೊಗ್ಗದ ಜನರಿಗೆ ಸಿಕ್ಕಿತು ಎಂದರು.
ಯಾವುದೇ ಆಡಂಬರವಿಲ್ಲ ಭಕ್ತರನ್ನು ಆಯಸ್ಕಾಂತದಂತೆ ಸೆಳೆದು ಅವರ ಮನಸ್ಸಿಗೆ ನಾಟುವಂತೆ ಅವರ ಆಧ್ಯಾತ್ಮ ಚಿಂತನೆಯನ್ನು ತಿಳಿಸುವ ರೀತಿಗೆ ಭಕ್ತ ಸಮೂಹ ಅವರನ್ನು ದೇವರೆಂದೆ ಭಾವಿಸಿ ಬರುತ್ತಿದ್ದರು. ಈಡೀ ಉಪನ್ಯಾಸದಲ್ಲಿ ದೇಶ, ಧರ್ಮ, ಮಾನವೀಯತೆ ಪದಗಳು ತುಂಬಿ ಹೋಗಿರುತ್ತಿತ್ತು. ವೈಯಕ್ತಿಕ ಶಿಸ್ತು, ಸರಳತೆ, ಆಡಂಭರವಿಲ್ಲದ ಜೀವನ ಜನರಿಗೂ ಪಾಠವಾಗಿತ್ತು. ಪ್ರಶಸ್ತಿಗಳನ್ನು ಅಪೇಕ್ಷೆಪಟ್ಟು ಪಡೆಯುತ್ತಿರುವ ಈ ದಿನಗಳಲ್ಲಿ ಕೇಂದ್ರ,ರಾಜ್ಯ ಹಾಗೂ ವಿಶ್ವವಿದ್ಯಾಲಯಗಳು ಯಾವುದೇ ಪ್ರಶಸ್ತಿ ನೀಡಿದರೂ ಕೂಡ ನಾನು ಅದಕ್ಕೆ ಅರ್ಹನಲ್ಲ ಎಂದು ಒಮ್ಮೆ ಯೋಚಿಸಿ ಎಂದು ಹೇಳಿ ನಯವಾಗಿ ತಿರಸ್ಕರಿಸುತ್ತಿದ್ದರು.
ಶರ್ಟ್‌ಗೆ ಜೇಬಿಲ್ಲ, ಕಾಲಿಗೆ ಚಪ್ಪಲಿ ಹಾಕಲ್ಲ, ದುಡ್ಡು ಮುಟ್ಟಲ್ಲ ಆದರೂ ಕೂಡ ಅವರ ಆಶ್ರಮದಲ್ಲಿ ನಿರಂತರವಾಗಿ ಭಕ್ತಾದಿಗಳೇ ಅವರ ಖರ್ಚಿನಲ್ಲಿ ದಾಸೋಹ ನಡೆಸುತ್ತಿದ್ದರು. ಸ್ವಾಭಾವಿಕವಾಗಿ ಸ್ಥಾನಮಾನಗಳು ಬಂದಾಗ ಮನುಷ್ಯನಿಗೆ ಸೊಕ್ಕು ಬರುತ್ತದೆ. ಆದರೆ ಕೋಟ್ಯಾಂತರ ಭಕ್ತರನ್ನು ಹೊಂದಿದ್ದ ಅವರಿಗೆ ಯಾವುದೇ ಆಸೆ ಆಕಾಂಕ್ಷೆಗಳು ಇರಲಿಲ್ಲ. ಯಾವುದೇ ಮೋಹಕ್ಕೆ ಒಳಗಾಗಲಿಲ್ಲ. ವಿದ್ಯಾಸಂಸ್ಥೆಗಳನ್ನು ಕಟ್ಟಲಿಲ್ಲ. ಆದರೆ ಜನರನ್ನು ವಿದ್ಯಾವಂತರನ್ನಾಗಿ ಮಾಡಿದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಈ ದೇಶವೇ ಆಧ್ಯಾತ್ಮದ ತಳಹಾದಿಯಲ್ಲಿ ನಿಂತಿದೆ. ತಮ್ಮದೇ ಶೈಲಿಯಲ್ಲಿ ಸಮಾಜದಲ್ಲಿ ಕ್ರಾಂತಿ ಮಾಡಿದವರು. ಬುದ್ಧ, ಬಸವ, ಶಂಕರ, ಮಧ್ವರ, ರಾಮಾನುಜರ ಸಾಲಿಗೆ ಸೇರಿದ ಶತಮಾನದ ಸಂತರು. ಶರಣರ ಸಾವನ್ನು ಮರಣದಲ್ಲಿ ನೋಡು ಎನ್ನುವಂತೆ ಅವರು ನಿಧನರಾದಾಗ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಜನಸಾಗರ ನೆರೆದಿದ್ದೆ ಸಾಕ್ಷಿ. ನುಡಿದಂತೆ ನಡೆದ ದಾರ್ಶನಿಕ ಎಂದರು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಜ್ಞಾನೇಶ್ವರ್, ಮೋಹನ್‌ರೆಡ್ಡಿ, ಸಂತೋಷ್ ಬಳ್ಳಕೆರೆ, ಮಾಜಿ ಮೇಯರ್ ಸುನೀತಾ ಅಣ್ಣಪ್ಪ, ಸುವರ್ಣಶಂಕರ್, ಸುರೇಖಾ ಮುರುಳೀಧರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post