ಕಲ್ಪ ಮೀಡಿಯಾ ಹೌಸ್ | ಮುಂಡಗೋಡ |
ತಾಲೂಕಿನ ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿ ವಾಪಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಸುಮಾರು 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಕಲ್ಲಹಕ್ಕಲ ವೀರಾಪುರ ಗ್ರಾಮದ ಕಾವ್ಯಾ ಬರಮಣ್ಣ ಬ್ಯಾಡಗಿ (17) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಒಂದು ಟ್ರಾಕ್ಟರ್‌ನಲ್ಲಿ 20 ಹಾಗೂ ಇನ್ನೊಂದು ಟ್ರಾಕ್ಟರ್‌ನಲ್ಲಿ 40 ವಿದ್ಯಾರ್ಥಿಗಳು ಪಕ್ಕದ ಕೊಳಗಿ ಗ್ರಾಮಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ವಾಪಸಾಗುತ್ತಿದ್ದ ವೇಳೆ ಅತಿಥಿ ಉಪನ್ಯಾಸಕರು ಟ್ರಾಕ್ಟರ್ ಚಲಾಯಿಸುತ್ತಿದ್ದು, ಅತಿವೇಗವಾಗಿ ಟ್ರಾಕ್ಟರ್ ಚಲಾಯಿಸಿದರಿಂದ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಮಳಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡಗೋಡ ತಾಲೂಕು ಆಸ್ಪತ್ರೆ ಮತ್ತು ಕೆಲವರನ್ನು ಶಿರಸಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ನಡೆದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗಳಿಗೆ ಆಗಮಿಸಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮುಂಡಗೋಡ ಠಾಣೆ ಸಿಪಿಐ ಸಿದ್ದಪ್ಪ ಸಿಮಾನಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















