ಕಲ್ಪ ಮೀಡಿಯಾ ಹೌಸ್ | ಸೊರಬ |
ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿನ ಪವಿತ್ರ ಗ್ರಂಥವಾಗಿದ್ದು, ಸಂವಿಧಾನ ರಚನೆಗೊಂಡು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ-ಸಡಗರದಿಂದ ಗಣರಾಜ್ಯೋತ್ಸವೆಂದು ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಡಾ. ಮೋಹನ್ ಭಸ್ಮೆ ಹೇಳಿದರು.
ಗುರುವಾರ ಪಟ್ಟಣದ ಡಾ. ರಾಜ್ ಕಲಾಕ್ಷೇತ್ರದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಸಂವಿಧಾನವು ಜಾರಿಗೆ ತಂದ ದಿನವನ್ನು ದೇಶವೇ ಸಂಭ್ರಮಿಸುತ್ತದೆ. ಗಣರಾಜ್ಯೋತ್ಸವವು ಪ್ರತಿಯೊಬ್ಬ ಭಾರತೀಯರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ. ದೇಶದ ಸಂವಿಧಾನವನ್ನು ಗೌರವಿಸುವ ಜೊತೆಗೆ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಬಡವ, ಶ್ರೀಮಂತ ಎಂಬ ಬೇಧಭಾವವಿಲ್ಲದೇ ಎಲ್ಲರೂ ಕಾನೂನಿನ ಮುಂದೆ ಸರಿ ಸಮಾನರಾಗಿದ್ದಾರೆ. ಮೂಲ ಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಪ್ರತಿಯೊಬ್ಬರು ಕರ್ತವ್ಯಗಳನ್ನು ಪಾಲಿಸಬೇಕು ಎಂದು ಕರೆನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ ಮಾತನಾಡಿ, ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜೆಗಳೇ ಅಧಿಕಾರ ನಡೆಸುವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ಆಳವಾದ ಅಧ್ಯಯನದ ಮೂಲಕ ದೇಶಕ್ಕೆ ಸಂವಿಧಾನವನ್ನು ನೀಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಪ್ರತಿಯೊಬ್ಬರು ಬಲಿಷ್ಟ ರಾಷ್ಟ್ರ ನಿರ್ಮಾಣದ ಸಂಕಲ್ಪ ಕೈಗೊಳ್ಳಬೇಕು ಎಂದರು.

ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ಎಂ.ಡಿ. ಉಮೇಶ್, ಶ್ರೀರಂಜನಿ ಪ್ರವೀಣ್ ಕುಮಾರ್, ಅನ್ಸರ್ ಅಹ್ಮದ್, ಪ್ರೇಮಾ ಟೋಕಪ್ಪ, ಆಫ್ರೀನಾ ಮೆಹಬೂಬ್ ಬಾಷಾ, ಸುಲ್ತಾನಾ ಸೈಯದ್ ಸಿರಾಜುದ್ದೀನ್, ಯು. ನಟರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ್, ತಾಪಂ ಇಒ ನಾಗರಾಜ ಅನ್ವೇಕರ್, ಬಿಇಒ ರಾಮಲಿಂಗಯ್ಯ, ಪಿಡಬ್ಲ್ಯುಡಿ ಇಲಾಖೆಯ ಎಇಇ ಉಮಾನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತೀಗೇರ್, ದೈಹಿಕ ಶಿಕ್ಷಣ ಸಂಯೋಜಕ ಲಿಂಗರಾಜ ಒಡೆಯರ್, ಶಿರಸ್ತೆದಾರ್ ನಿರ್ಮಲಾ, ಕಂದಾಯ ಇಲಾಖೆಯ ಬಿ.ಜೆ. ವಿನೋದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯವರು ಉಪಸ್ಥಿತರರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















