ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಳ್ಳವರು ಬಡವರ ನಡುವಿನ ಅಂತರವನ್ನು ಹೋಗಲಾಡಿಸಿ ಸಮಾನತೆಯ ವ್ಯವಸ್ಥೆಯ ನಿರ್ಮಾಣಕ್ಕೆ ಸರ್ವೋದಯ ಕಲ್ಪನೆ ಪೂರಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲದ ಸಹಯೋಗದಲ್ಲಿ ಸೋಮವಾರ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಸರ್ವೋದಯ ದಿನಾಚರಣೆ ರಾಜ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ವೋದಯ ವ್ಯವಸ್ಥೆಯು ಸಾಮಾಜಿಕ ಹಿತದಲ್ಲಿ ವೈಯುಕ್ತಿಕ ಹಿತ ಕಾಣುವ, ಎಲ್ಲಾ ವೃತ್ತಿಯನ್ನು ಗೌರವಿಸುವ, ಯಾವುದೇ ಸ್ಥಾನದಲ್ಲಿರುವ ವ್ಯಕ್ತಿಯ ಶ್ರಮಾದಾನದ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ. ಕೂಡಿಟ್ಟ ಹಣದಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಯಾವಾಗ ಗಳಿಸಿದ ಸಂಪತ್ತು ಸಮಾಜದಲ್ಲಿ ಮರು ಹೂಡಿಕೆಯಾಗುತ್ತಾ ಹೋಗುತ್ತದೆ, ಆಗ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ.
ಗಾಂಧೀಜಿಯವರ ಆಶಯದಂತೆ ಪ್ರಾಬಲ್ಯತೆ, ಶೋಷಣೆ, ಅಶಾಂತಿಗೆ ಸಮಾಜದಲ್ಲಿ ಅವಕಾಶವಿಲ್ಲ. ಅವೆಲ್ಲವನ್ನೂ ಹೋಗಲಾಡಿಸಿ ಶಾಂತಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಶಿಕ್ಷಣದಿಂದ ಸಾಧ್ಯವಾಗಲಿದೆ. ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಗಾಂಧೀಜಿಯವರ ಆಶಯದ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ, ಬೇಕಾದ ದಿಕ್ಸೂಚಿ ನೀಡುವ ಯೋಚನೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಯುವ ಸಮೂಹಕ್ಕೆ ನೀಡಬೇಕಿದೆ ಎಂದು ಹೇಳಿದರು.

ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಸುಮನಸ್ ಕೌಲಗಿ ಮಾತನಾಡಿ, ಎಲ್ಲೆಲ್ಲಿ ಅಭಿವೃದ್ಧಿಯ ಪದ ಬಳಕೆಯಾಗುತ್ತಿದೆಯೊ, ಅಲ್ಲಿ ನಮಗೆ ಬೇಕಾದ ಪ್ರಾಣಿ ಪಕ್ಷಿ ಪರಿಸರದ ನಾಶವಾಗುತ್ತಿದೆ. ಹಾಗಾದರೇ ಎಲ್ಲಾ ಜೀವಿಗಳನ್ನು ಉಳಿಸಿಕೊಂಡು ಹೋಗುವ ಅಭಿವೃದ್ಧಿ ಹೇಗೆ ಎನ್ನುವ ಪ್ರಶ್ನೆಗೆ ಗಾಂಧೀಜಿಯ ವಿಚಾರಗಳು ಉತ್ತರವಾಗಿ ಸಿಗುತ್ತದೆ.
ಸ್ವರಾಜ್ಯವೆಂದರೇ ಕೇವಲ ಬ್ರಿಟೀಷರಿಂದ ಭಾರತ ಸ್ವಾತಂತ್ರ ಹೊಂದುವುದು ಮಾತ್ರವಲ್ಲ. ಜೊತೆಗೆ ಪರಿಸರಕ್ಕೆ ಪೂರಕವಾದ ಅಭಿವೃದ್ಧಿಯ ಕಲ್ಪನೆಯು ಸ್ವರಾಜ್ಯದಿಂದ ಸಿಗಲಿದೆ. ನೈತಿಕತೆ, ರಾಜಕೀಯ ಆರ್ಥಿಕತೆ ಸಮಾಜವನ್ನು ನಿರ್ಣಯಿಸಲಿದೆ. ಅದರೇ ಎಲ್ಲರೂ ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೇನೆ ಎಂಬ ನೈತಿಕತೆ ಕಣ್ಮರೆಯಾಗಿದೆ.

ಗಾಂಧೀಜಿ ಅಂಬೇಡ್ಕರ್ ಅವರನ್ನು ದೇವರ ರೀತಿ ಕಾಣದೆಯೇ, ಮನುಷ್ಯ ರೂಪಿಯಾಗಿ ನೋಡಬೇಕಾಗಿದೆ. ಅವರು ನಡೆಸಿದ ಸವಾಲುಗಳು ನಮ್ಮ ಬದುಕನ್ನು ಪ್ರಭಾವಿತಗೊಳಿಸಬೇಕಿದೆ.
ಸ್ವಾವಲಂಬನೆಯ ಮೇಲೆ ಆರ್ಥಿಕತೆ ಇರಬೇಕು. ಕೊಡು ಕೊಳ್ಳುವಿಕೆಯ ನೈತಿಕ ಆಯಾಮ ಹೆಚ್ಚಾಗಬೇಕು. ಒಂದು ವಸ್ತುವಿನ ತಯಾರಿಕೆಯ ಹಿಂದಿನ ವಾಸ್ತವತೆ ಅರಿತು, ವಸ್ತುಗಳನ್ನು ಕೊಂಡುಕೊಳ್ಳುವಾಗ ನೈತಿಕ ಜವಾಬ್ದಾರಿ ಗ್ರಾಹಕನಿಗಿರಬೇಕಿದೆ. ಬ್ರಾಂಡೆಡ್ ಬಟ್ಟೆಗಳ ಉತ್ಪಾದನೆಯ ಹಿಂದಿನ ಶೋಷಣೆಯ ಕರಾಳತೆಯ ಅರಿವಿರಬೇಕು. ನಮ್ಮ ಸುತ್ತಲಿನ ದೇಶೀಯ ಉತ್ಪಾದನಾ ವ್ಯವಸ್ಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಜನಸಂಖ್ಯೆಯ ಸ್ಪೋಟದಿಂದಾಗಿ ಅವಶ್ಯಕತೆಗೆ ಅನುಸಾರವಾಗಿ ಎಲ್ಲವನ್ನು ತ್ಯಾಗ ಮಾಡುತ್ತಿದ್ದೇವೆ. ಹಳ್ಳಿಗಳಲ್ಲಿ ಸ್ವಾರ್ಥ ಪರ ಜೀವನ ನಿರ್ಮಾಣವಾಗುತ್ತಿರುವುದು ಅತ್ಯಂತ ಅಪಾಯಕಾರಿ ವಿಚಾರ. ಹಳ್ಳಿಗಳ ಸೊಸೈಟಿ ಮಾಲ್ ಗಳಾಗಿ ಬದಲಾಗಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಸರ್ವೋದಯ ಮಂಡಲ ರಾಜ್ಯಾಧ್ಯಕ್ಷರಾದ ಡಾ.ಹೆಚ್.ಎಸ್.ಸುರೇಶ್, ಕಾರ್ಯದರ್ಶಿ ಯು.ಚಿ.ದೊಡ್ಡಯ್ಯ, ಜಿಲ್ಲಾಧ್ಯಕ್ಷರಾದ ಭಗವಂತರಾವ್, ಪ್ರಾಂಶುಪಾಲರಾದ ಡಾ.ಹೆಚ್.ಎಸ್. ನಾಗಭೂಷಣ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















