ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭಿವೃದ್ಧಿಯ ಬೆನ್ನುಬಿದ್ದು, ಸಾಲು ಸಾಲು ಯೋಜನೆಗಳನ್ನು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹೊತ್ತು ತರುತ್ತಿರುವ ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ ಅವರು ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಈ ಕುರಿತ ಎಕ್ಸ್’ಕ್ಲೂಸಿವ್ ಮಾಹಿತಿ ನಮ್ಮ ಬಳಿಯಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಾಖಲೆ ಎನ್ನಬಹುದಾದ ಯೋಜನೆಗಳನ್ನು ಜಾರಿಗೊಳಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಈಗ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯೊಂದಕ್ಕೆ ಪ್ಲಾನ್ ಮಾಡಿದ್ದಾರೆ. ಅದೇ ಮಲೆನಾಡು ಹಾಗೂ ಬಯಲುಸೀಮೆಯನ್ನು ಶೀಘ್ರದಲ್ಲಿ ಸಂಪರ್ಕಿಸುವ ಚತುಷ್ಪಥ ಹೆದ್ದಾರಿ ಯೋಜನೆ.
ಏನಿದು ಯೋಜನೆ?
ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯನ್ನು ಸಂಪರ್ಕಿಸಲು ನಾಲ್ಕು ಪಥದ ರಸ್ತೆಯನ್ನಾಗಿ ನಿರ್ಮಿಸುವ ಮಹತ್ವದ ಯೋಜನೆ ಇದಾಗಿದೆ.

ಮಾರ್ಗ ಹೇಗೆ?
ಮಲೆನಾಡು ಹಾಗೂ ಬಯಲುಸೀಮೆಯನ್ನು ಸಂಪರ್ಕಿಸುವ ವಿಶಿಷ್ಟ ಯೋಜನೆ ಇದಾಗಿದೆ. ಶಿವಮೊಗ್ಗ-ಹೊನ್ನಾಳಿ-ಹರಿಹರ-ತೆಲಗಿ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಮರಿಯಮ್ಮನಹಳ್ಳಿಯನ್ನು ನೇರವಾಗಿ ಸಂಪರ್ಕಿಸುವ ಪ್ರಸ್ತಾವನೆ ಸಿದ್ದಗೊಂಡಿದೆ.
ಎಷ್ಟು ದೂರ ಕಡಿಮೆಯಾಗುತ್ತದೆ?
ಶಿವಮೊಗ್ಗದಿಂದ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ತಲುಪುವ ಸದ್ಯ ಇರುವ ರಾಜ್ಯ ಹೆದ್ದಾರಿ ಅತ್ಯಂತ ಕಳಪೆಯಾಗಿದೆ. ಉತ್ತಮ ರಸ್ತೆ ಮೂಲಕ ತೆರಳಬೇಕಾದರೆ ಚಿತ್ರದುರ್ಗದ ಮೂಲಕ ಸುಮಾರು 220 ಕಿಮೀ ಸಾಗಬೇಕು.

ಆದರೆ, ಪ್ರಸ್ತುತ ಯೋಜನೆ ಶಿವಮೊಗ್ಗದಿಂದ ಹರಿಹರ ಹರಪನಹಳ್ಳಿ ಮಾರ್ಗವಾಗಿ 182 ಕಿಮೀ ದೂರದ ಚತುಷ್ಟಥ ಹೆದ್ದಾರಿ ಯೋಜನೆ ಇದಾಗಿದೆ. ಅಲ್ಲಿಗೆ ಯೋಜನೆ ಸಾಕಾರವಾದ ನಂತರ ಅಂದಾಜು 40 ಕಿಮೀ ದೂರ ಕಡಿಮೆಯಾಗುತ್ತದೆ.
ಹೆದ್ದಾರಿ ಉನ್ನತೀಕರಣಕ್ಕೆ ಪ್ರಸ್ತಾವನೆ
ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯನ್ನು ಹರಿಹರದ ಮೂಲಕ ಸಂಪರ್ಕಿಸುವ ರಾಜ್ಯ ಹೆದ್ದಾರಿ 25ರ ರಸ್ತೆ ಕಳಪೆಯಾಗಿದ್ದು, ಸಂಚಾರ ದುಸ್ತರವಾಗಿದೆ. ಹೀಗಾಗಿ, ಯೋಜನೆಯ ಜಾರಿಗಾಗಿ ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಿ, ಚತುಷ್ಪಥ ಹೆದ್ದಾರಿಯನ್ನಾಗಿ ಮಾಡುವ ಯೋಜನೆ ಸಂಸದ ರಾಘವೇಂದ್ರ ಅವರದ್ದು.
ಮರಿಯಮ್ಮನಹಳ್ಳಿಯ ಸಂಪರ್ಕ ಏಕೆ?
ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಿದೆ. ಈ ಭಾಗದಲ್ಲಿ ಮರಿಯಮ್ಮನಹಳ್ಳಿ ಮಹತ್ವದ ಜಂಕ್ಷನ್ ಆಗಿದ್ದು, ಹಲವು ಕಡೆಗಳಿಗೆ ಸಂಪರ್ಕ ಸ್ಥಳವಾಗಿದೆ. ಹೀಗಾಗಿ, ಶಿವಮೊಗ್ಗದಿಂದ ಹರಿಹರ ಮಾರ್ಗವಾಗಿ ಚತುಷ್ಪಥ ರಸ್ತೆ ನಿರ್ಮಾಣವಾದರೆ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿಗೆ ಇದು ಸಂಪರ್ಕಿಸುತ್ತದೆ.
ಎಷ್ಟು ಜಿಲ್ಲೆಗೆ ಸಂಪರ್ಕ?
ಈ ಬೃಹತ್ ಯೋಜನೆ ಶಿವಮೊಗ್ಗ-ದಾವಣಗೆರೆ-ವಿಜಯನಗರ ಜಿಲ್ಲೆಗಳಲ್ಲಿ ಹಾದುಹೋಗುತ್ತದೆ.
ಅಂತರ್ ಜಿಲ್ಲೆ ಹಾಗೂ ಅಂತಾರಾಜ್ಯ ಸಂಪರ್ಕ
ಯೋಜನೆ ಜಾರಿಯಿಂದ ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಿಗೆ ನೇರವಾಗಿ ಸಹಕಾರಿಯಾಗಿದೆ. ನೇರವಾಗಿ ಮಲೆನಾಡು ಹಾಗೂ ಬಯಲುಸೀಮೆಯನ್ನು ಸಂಪರ್ಕಿಸುವ ಯೋಜನೆ ಇದಾಗಿದ್ದರೂ ಕರಾವಳಿ ಜಿಲ್ಲೆಗಳು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಂಪರ್ಕಕ್ಕೂ ಸಹ ಸಹಕಾರಿಯಾಗಲಿದೆ.
ಮರಿಯಮ್ಮನಹಳ್ಳಿಯಿಂದ ಆ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಿದೆ. ಹೀಗಾಗಿ, ಈ ಯೋಜನೆಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಶಿವಮೊಗ್ಗದಿಂದ ಸಂಪರ್ಕ ಶೀಘ್ರವಾಗುತ್ತದೆ. ಪ್ರಮುಖವಾಗಿ ಮಂತ್ರಾಲಯ ಸೇರಿದಂತೆ ಆ ಭಾಗದ ಕ್ಷೇತ್ರಗಳಿಗೆ ತೆರಳುವವರಿಗೆ ಸುಲಭವಾಗಲಿದೆ.
ಇನ್ನು, ಶಿವಮೊಗ್ಗ-ಮಲ್ಪೆ ಸಂಪರ್ಕಿಸುವ ಸುಮಾರು 600 ಕೋಟಿ ರೂ. ವೆಚ್ಚದ ಹೆಬ್ರಿ-ಮಲ್ಪೆ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಇನ್ನೊಂದೆಡೆ ಸಿಗಂಧೂರು ಸೇತುವೆ ಕಾಮಗಾರಿಯೂ ಸಹ ಪ್ರಗತಿಯಲ್ಲಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ-ಮರಿಯಮ್ಮನಹಳ್ಳಿ ಚತುಷ್ಪಥ ಹೆದ್ದಾರಿ ನಿರ್ಮಾಣವಾದರೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ನಮ್ಮ ರಾಜ್ಯದ ಬಯಲುಸೀಮೆ ಜಿಲ್ಲೆಗಳ ಪ್ರವಾಸಿಗರಿಗೆ ಜೋಗ, ಸಿಗಂಧೂರು, ಕೊಲ್ಲೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದ ಕ್ಷೇತ್ರಗಳಿಗೆ ತೆರಳಲು ಅನುಕೂಲವಾಗುತ್ತದೆ.
ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲೆಗಳ ವ್ಯಾಪಾರ ವ್ಯವಹಾರಗಳಿಗೂ ಸಹ ಇದು ಪ್ರಯೋಜನವಾಗುತ್ತದೆ.
ಯೋಜನೆಯ ಗಾತ್ರ
ಹಲವು ಜಿಲ್ಲೆಗಳು ಹಾಗೂ ಮೂರು ರಾಜ್ಯಗಳನ್ನು ಸಂಪರ್ಕಿಸುವ ಈ ಮಹತ್ವದ ಯೋಜನೆ ಸುಮಾರು 3 ಸಾವಿರ ಕೋಟಿ ರೂ. ಮೊತ್ತದ್ದಾಗಿದೆ.
ಯಾವಾಗ ಜಾರಿಯಾಗಬಹುದು?
ಈ ಮಹತ್ವದ ಬೃಹತ್ ಯೋಜನೆ ಈಗಾಗಲೇ ಸಿದ್ದವಾಗಿದ್ದು, ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಈಗಾಗಲೇ ಚರ್ಚೆ ನಡೆಸಿ, ಯೋಜನೆ ಜಾರಿಗೆ ಮನವಿ ಮಾಡಿದ್ದಾರೆ. ಯೋಜನೆಗಾಗಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಸಚಿವರು ಈಗಾಗಲೆ ಸಮ್ಮತಿ ಸೂಚಿಸಿದ್ದಾರೆ.
ಸಂಸದರ ಮನವಿಗೆ ತಾತ್ವಿಕ ಒಪ್ಪಿಗೆ ದೊರೆತಿದ್ದು, ಆಡಳಿತಾತ್ಮಕ ಅನುಮೋದನೆ ಇನ್ನೂ ದೊರೆಯಬೇಕಿದೆ. ಬಹುತೇಕ ಈ ವರ್ಷದ ಅಂತ್ಯಕ್ಕೆ ಈ ಯೋಜನೆ ಜಾರಿಯಾಗುವ ಎಲ್ಲ ಸಾಧ್ಯತೆಗಳು ಇವೆ.
ಇಂತಹ ಮಹತ್ವದ ಯೋಜನೆಯೊಂದಕ್ಕೆ ಮುಂದಾಗಿರುವ ಸಂಸದ ರಾಘವೇಂದ್ರ ಹಾಗೂ ಅಧಿಕಾರಿಗಳಿಗೆ ಅಭಿನಂದನೆಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















