ಕಲ್ಪ ಮೀಡಿಯಾ ಹೌಸ್ | ಸೊರಬ |
ದೆಹಲಿ ಮಾದರಿಯಲ್ಲಿ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಾಗೂ ತಾಲೂಕಿನ ಸುಗಮ ಆಡಳಿತಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ‘ವಿಸ್ತಾರ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಹೇಳಿದರು.
ಶುಕ್ರವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಜಂಗಿನಕೊಪ್ಪ ಗ್ರಾಮದ 18-35 ಎಕರೆ ವಿಸ್ತೀರ್ಣದಲ್ಲಿ 49.68 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಒಂದೇ ಸೂರಿನಡಿ ಆಡಳಿತ ಸೌಧವನ್ನು ನಿರ್ಮಿಸಲಾಗುವುದು. ಯೋಜನೆ ಮಂಜೂರಾತಿಯ ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ‘ವಿಸ್ತಾರ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಪ್ರೇರಣೆಗೊಂಡು ಶಾಸಕ ಕುಮಾರ್ ಬಂಗಾರಪ್ಪನವರು ಮುಖ್ಯಮಂತ್ರಿಗಳು ಹಾಗೂ ಸಚಿವರ ಬಳಿ ಬಹು ದಿನಗಳಿಂದ ಸುದೀರ್ಘ ಚರ್ಚೆ ನಡೆಸಿ ಹೆಚ್ಚಿನ ಶ್ರಮ ವಹಿಸುವ ಮೂಲಕ ಈ ಮಹತ್ವಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದು ತಾಲೂಕಿನ ಇತಿಹಾಸದಲ್ಲಿ ಮೈಲಿಗಲ್ಲಾಗಲಿದ್ದು, ಹೆಮ್ಮೆಯ ವಿಚಾರವಾಗಿದೆ.
ಜನಪರ ಯೋಜನೆಗಳು ಸಾಕಾರಗೊಳ್ಳಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಿದೆ. ಇಂತಹ ಮಹತ್ವಕಾಂಕ್ಷಿ ಯೋಜನೆಯನ್ನು ಬಹಳ ಆಸಕ್ತಿ, ಕಾಳಜಿಯಿಂದ ಕುಮಾರ್ ಬಂಗಾರಪ್ಪನವರು ಈ ಯೋಜನೆ ಜಾರಿಗೊಳಿಸಿದ್ದಾರೆ. ತಾಲೂಕಿಗೆ ವಿಶೇಷ ಯೋಜನೆಗಳನ್ನು ತರುವಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಚಿವರು ಹಾಗೂ ಮುಖ್ಯಮಂತ್ರಿಗಳ ಸಹಕಾರಕ್ಕೆ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು ಇದೇ ತಿಂಗಳ ಕೊನೆಯ ವಾರದಲ್ಲಿ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಆಗಮಿಸಿ ವಿಸ್ತಾರ ಯೋಜನೆ ಹಾಗೂ ದಂಡಾವತಿ ಯೋಜನೆಯಡಿಯಲ್ಲಿ 750 ಕೋಟಿ ರೂಪಾಯಿ ವೆಚ್ಚದಲ್ಲಿ 37 ಬ್ಯಾರೇಜ್‌ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ನಮೋ ವೇದಿಕೆಯವರು ಬಿಜೆಪಿಯ ವಿರುದ್ಧ ಅನಗತ್ಯ ಹೇಳಿಕೆಗಳನ್ನು ಪದೇಪದೇ ನೀಡುತ್ತಿದ್ದು, ಇಂತಹ ಹೇಳಿಕೆ ನೀಡುವುದನ್ನು ಪಕ್ಷ ಖಂಡಿಸುತ್ತದೆ. ಜಿಲ್ಲಾಧ್ಯಕ್ಷರು ನಮೋ ವೇದಿಕೆಯ ಹಲವರನ್ನು ಈಗಾಗಲೇ ಪಕ್ಷದ ಜವಾಬ್ದಾರಿಯುತ ಹುದ್ದೆಯಿಂದ ಕೈ ಬಿಟ್ಟಿದ್ದಾರೆ. ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಯ ಆಯ್ಕೆ ಯಾರ ಹೇಳಿಕೆಯಿಂದಲೂ ಆಗುವುದಿಲ್ಲ. ಸೂಕ್ತ ಸಮಯದಲ್ಲಿ ಸಮಿತಿಯವರ, ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಅಭ್ಯರ್ಥಿಯ ಆಯ್ಕೆ ನಡೆಯುವುದು ಪಕ್ಷದ ತತ್ವ, ಸಿದ್ದಾಂತವಾಗಿದೆ. ನಮೋ ವೇದಿಕೆಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲವೆಂದು ಹಲವಾರು ಬಾರಿ ತಿಳಿಸಲಾಗಿದೆ. ನಮ್ಮ ಮುಖ್ಯ ಉದ್ದೇಶ ಪಕ್ಷ ಸಂಘಟನೆಯ ಮೂಲಕ ಬಲವರ್ಧನೆಗೊಳಿಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ತಾಲೂಕು ಯುವಾ ಮೋರ್ಚಾ ಅಧ್ಯಕ್ಷ ಅಭಿಷೇಕ ಬೇನ್ನೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಪುರಸಭೆ ಸದಸ್ಯ ಎಂ.ಡಿ. ಉಮೇಶ, ಬಗೆರ್ ಹುಕಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ, ಜಗದೀಶ ಗೆಂಡ್ಲ, ಕನಕದಾಸ ಕಲ್ಲಂಬಿ, ರಮೇಶ ಕೊರಕೋಡು, ಅಭಿಷೇಕ ಪಾಟೀಲ್, ಲಿಂಗರಾಜ, ಜಗದೀಶ ಮತ್ತಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















