ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಭಾರತದ ಸಂಸ್ಕೃತಿಯಲ್ಲಿ ಗತವೈಭವ ಸಾರುವ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕಂಪ್ಲಿ ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ಕಂಪ್ಲಿ ಇತಿಹಾಸವನ್ನು ಮರುಕಳಿಸುವ ಉತ್ಸವ ಇದಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು Minister Shriramulu ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕಂಪ್ಲಿ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಮೊದಲ ಬಾರಿಗೆ ಪಟ್ಟಣದ ಕುರುಗೋಡು ಮುಖ್ಯ ರಸ್ತೆಯ ಕಲ್ಗುಡಿ ಬಡಾವಣೆಯ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ನಡೆಸಲಾಗುತ್ತಿರುವ ಕಂಪ್ಲಿ ಕಲಾರತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ ಜಿಲ್ಲೆಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಜ.21, 22 ರಂದು ಬಳ್ಳಾರಿ ಉತ್ಸವವನ್ನು ನಡೆಸಲಾಗಿತ್ತು, ಅದೇ ರೀತಿಯಾಗಿ ಫೆ.11, 12 ರಂದು ಕಂಪ್ಲಿ ಉತ್ಸವ ಆಚರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಉತ್ಸವಗಳನ್ನು ಶಾಶ್ವತವಾಗಿ ಆಚರಿಸಲಾಗುತ್ತದೆ ಎಂದರು.
ಕಂಪ್ಲಿಯು ಕಂಪಲಿರಾಯ ಮತ್ತು ಗಂಡುಗಲಿ ಕುಮಾರರಾಮ ರಂತಹ ಮಹಾವೀರರ ಶೌರ್ಯ, ಪರಾಕ್ರಮ ಗುಣಗಳನ್ನು ಹೊಂದಿರುವಂತಹ ಭೂಮಿ ಇದಾಗಿದೆ ಎಂದರು.
ಕಂಪ್ಲಿ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಬದ್ಧವಾಗಿದ್ದು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ಕಂಪ್ಲಿ ಕೋಟೆಯಲ್ಲಿ 21 ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಅವುಗಳನ್ನು ಪುರಾತತ್ವ ಇಲಾಖೆಯು ಸಂಶೋಧನೆ ನಡೆಸುತ್ತಿದೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕಿಂತಲೂ ಪುರಾತನ ಇತಿಹಾಸ ಕಂಪ್ಲಿ ಹೊಂದಿದೆ ಎಂದು ತಿಳಿಸಿದರು.
Also read: ಮಾರ್ಚ್ ತಿಂಗಳಲ್ಲಿ ಬೆಂಗಳೂರು-ಮೈಸೂರು ದಶಪಥ ರಸ್ತೆ ಲೋಕಾರ್ಪಣೆ: ಟೋಲ್ ಎಷ್ಟು?
ಹಂಪಿ ಸರ್ಕೀಟ್ ನಲ್ಲಿ ಸೇರ್ಪಡೆ; ಸಂಸ್ಕೃತಿಯನ್ನು ಬಿಂಬಿಸುವ ಉತ್ಸವಗಳಾದ ಬಾದಾಮಿ, ಐಹೊಳೆ, ಲಕ್ಕುಂಡಿ ಉತ್ಸವಗಳಂತೆ ಮುಂಬರುವ ದಿನಗಳಲ್ಲಿ ಕಂಪ್ಲಿ ಉತ್ಸವವನ್ನು ಆಚರಿಸುವ ಮೂಲಕ ಇತಿಹಾಸ ತಿಳಿಸುವುದು ಮತ್ತು ಪ್ರವಾಸೋದ್ಯಮ ಅಭಿವೃದ್ದಿಯ ಹಂಪಿ ಸರ್ಕೀಟ್ ನಲ್ಲಿ ಕಂಪ್ಲಿ ಸೇರಿಸಲು ಚರ್ಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಯ ಸಮಗ್ರ ಮಾಹಿತಿಯನ್ನು ಪ್ರಸ್ತುತಪಡಿಸಿದರು.
ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಮಾತನಾಡಿ ಕಂಪ್ಲಿ ನನ್ನ ಜನ್ಮಭೂಮಿಯಾಗಿದೆ. ನನ್ನ ತಂದೆಯ ಬಹುತೇಕ ಜೀವಿತ ಅವಧಿಯನ್ನು ಇಲ್ಲಿಯೇ ಕಳೆದಿದ್ದಾರೆ. ಇಲ್ಲಿಗೆ ಏನಾದರೂ ಅಭಿವೃದ್ದಿ ಮಾಡಬೇಕೆಂಬ ತುಡಿತವಿದೆ. ಈ ಹಿಂದೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು 20 ಕೋಟಿ ಅನುದಾನ ನೀಡಲಾಗಿದೆ. ಮತ್ತು ಕಂಪ್ಲಿ ಉತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 75 ಲಕ್ಷ ನೀಡಲಾಗಿದೆ. ವಿಜಯನಗರ ಜಿಲ್ಲೆ ಯೊಂದಿಗೆ ಕಂಪ್ಲಿ ಸೇರಲಿಲ್ಲ ಎಂಬ ಬೇಸರ ಇಲ್ಲಿನ ಜನರಲ್ಲಿ ಇರಬಹುದು. ಆದರೆ ತಾಂತ್ರಿಕ ತೊಂದರೆಯಿಂದ ವಿಜಯನಗರದೊಂದಿಗೆ ಸೇರಲಿಲ್ಲ ಹೊರತು ಬೇರಾವುದೇ ಉದ್ದೇಶ ಇಲ್ಲ ಎಂದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೊದಲ ಬಾರಿಗೆ ನಡೆಸಲಾಗುತ್ತಿರುವ ಉತ್ಸವವು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು, ಅದು ಈಗ ಕೂಡಿ ಬಂದಿದೆ. ಇದಕ್ಕೆ ಸಹಕರಿಸಿದ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಮಾಜಿ ಸಂಸದೆ ಜೆ.ಶಾಂತಾ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಹೊಸಪೇಟೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ, ವೆಂಕಟೇಶ ಪೂಜಾರಿ, ತಹಶೀಲ್ದಾರ ಗೌಸಿಯಾ ಬೇಗಂ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ಹಿರಿಯ ಮುಖಂಡರುಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post