ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತ್ರಸ್ತರಿಗೆ ಹಕ್ಕುಪತ್ರ ನೀಡದಿದ್ದರೆ ವಿಮಾನ ನಿಲ್ದಾಣ ಉದ್ಘಾಟನೆಯನ್ನು ಬಹಿಷ್ಕರಿಸುತ್ತೇವೆ ಎಂದು ಸೋಗಾನೆ ಭೂಹಕ್ಕು ಸಂತ್ರಸ್ತರ ಹೋರಾಟ ಸಮಿತಿ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ತಿಳಿಸಿದೆ.
ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರಾದ ತೀ.ನ. ಶ್ರೀನಿವಾಸ್ ಮತ್ತು ಎಂ.ಬಿ. ಕೃಷ್ಣಪ್ಪ ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರನ್ನು ನಿರ್ಲಕ್ಷ್ಯ ಮಾಡಿದೆ. ಹಕ್ಕು ಪತ್ರ ಕೊಡುತ್ತೇವೆ. ನಿವೇಶ ನೀಡುತ್ತೇವೆ. ಹುಬ್ಬಳ್ಳಿ ಮಾದರಿಯಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಸುಳ್ಳು ಹೇಳುವುದರಲ್ಲಿಯೆ ಕಾಲ ಕಳೆಯುತ್ತಿದ್ದಾರೆ. ರೈತರ ಅಲೆದಾಟ ತಪ್ಪಿಲ್ಲ ಎಂದು ದೂರಿದರು.
ರನ್‌ವೇ ಜಾಸ್ತಿ ಮಾಡಲು ರೈತರು ಮತ್ತಷ್ಟು ಭೂಮಿಯನ್ನು ಕೊಟ್ಟಿದ್ದರು. ಸರ್ಕಾರ ಇದಕ್ಕಾಗಿ 10ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣ ಡಿಸಿ ಖಾತೆಯಲ್ಲಿದೆ. ಆದರೆ ಅಧಿಕಾರಿಗಳು ಅದನ್ನು ನೀಡದೆ ಈ ಭೂಮಿ ನಿಮ್ಮದಲ್ಲ. ಸರ್ಕಾರದ್ದು ಎಂದು ಮತ್ತೆ ಭೂಮಿ ಕೊಟ್ಟ ರೈತರ ವಿರುದ್ಧವೇ ಕೇಸು ಹಾಕಿದೆ. ನಾನೂರು ಜನರಿಗೆ ನಿವೇಶನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲು ನಿಮಗೆ ನಿವೇಶನದ ಹಕ್ಕುಪತ್ರ ನೀಡುತ್ತೇವೆ ಎಂದು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಸಂಸದ ಮತ್ತು ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಆ ಭರವಸೆ ಈಗ ಹುಸಿಯಾಗಿದೆ ಎಂದರು.
Also read: ಡಾ. ಅಜಿತ್ ಹರೀಶಿ ಅವರ ಕನಸಿನ ದನಿ ಕವನ ಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ
ಇನ್ನೆರಡು ದಿನಗಳಲ್ಲಿ ಅಂದರೆ ಉದ್ಘಾಟನೆಗೆ ಮೊದಲು ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಬೇಕು. ರಾಜ್ಯಸರ್ಕಾರ ಇದರ ಹೊಣೆ ಹೊರಬೇಕು. ಅಕಸ್ಮಾತ್ ಸಮಸ್ಯೆ ಬಗೆಹರಿಯದಿದ್ದರೆ ಸಂತ್ರಸ್ತರು ಮತ್ತು ರೈತರು ವಿಮಾನ ನಿಲ್ದಾಣದ ಬಳಿಯೇ ಮುಷ್ಕರ ಮಾಡುವುದಾಗಿ ಎಚ್ಚರಿಸಿದರು.
ಸರ್ಕಾರ ಶರಾವತಿ, ವರಾಹಿ ಯೋಜನೆ ಸೇರಿದಂತೆ ಎಲ್ಲಾ ರೀತಿಯ ಯೋಜನೆಗಳ ಸಂತ್ರಸ್ತರನ್ನು ಕಡೆಗಣಿಸುತ್ತಿದೆ. ಅನ್ನದಾತರನ್ನು ಮೆರೆತಿದೆ. ಅದರಲ್ಲೂ ಮಲೆನಾಡು ಸಂತ್ರಸ್ತರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಮಾತಿನಲ್ಲಿ ಮನೆ ಕಟ್ಟುತ್ತಿದ್ದಾರೆ. ಇನ್ನು ಈ ಭ್ರಮೆಗಳೆಲ್ಲಾ ಬೇಡ. ರೈತರೆಲ್ಲ ಒಟ್ಟಾಗುತ್ತಿದ್ದಾರೆ. ಎಲ್ಲ ಸಂತ್ರಸ್ತರ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟವನ್ನು ಆರಂಭಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಾನಂದ್, ಶಿವಕುಮಾರ್, ಗಣೇಶ್, ಚನ್ನಕೇಶವ, ರವಿಕುಮಾರ್, ರಾಮಣ್ಣ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post