Read - 2 minutes


ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನರೇ ಕಾಂಗ್ರೆಸ್ಸಿಗರ ಕಿವಿ ಮೇಲೆ ಹೂವನ್ನಿಡಲಿದ್ದಾರೆ. ಆ ದಿನಗಳು ತುಂಬ ದೂರವಿಲ್ಲ. ಶೀಘ್ರದಲ್ಲೇ ಇದು ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಬಿಜೆಪಿ ಪೋಸ್ಟರ್ಗಳ ಮೇಲೆ ಕಾಂಗ್ರೆಸ್ನಿಂದ ಕಿವಿ ಮೇಲೆ ಹೂವು ಪೋಸ್ಟರ್ ಅಭಿಯಾನಕ್ಕೆ ಪ್ರತಿಕ್ರಿಯಿಸಿ, ಬಜೆಟ್ ವೇಳೆಯೂ ಕಾಂಗ್ರೆಸ್ಸಿಗರು ಸದನಕ್ಕೆ ಕಿವಿ ಮೇಲೆ ಹೂವಿಟ್ಟುಕೊಂಡು ಬಂದಿದ್ದರು. ಇದೀಗ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ. ಜನರೇ ಕಾಂಗ್ರೆಸ್ಸಿಗರ ಕಿವಿ ಮೇಲೆ ಹೂವನ್ನಿಡಲಿದ್ದಾರೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ದೂರ ದೃಷ್ಟಿಯಿಂದ ರಾಜ್ಯದಲ್ಲೇ ಎರಡನೇ ದೊಡ್ಡ ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿ ನಿರ್ಮಾಣಗೊಂಡಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಹೊರತು ಪಡಿಸಿದರೆ ಶಿವಮೊಗ್ಗ ವಿಮಾನ ನಿಲ್ದಾಣವೇ ರಾಜ್ಯದಲ್ಲಿ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಮಲೆನಾಡು ಜಿಲ್ಲೆಗಳು ಮಾತ್ರವಲ್ಲದೆ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಿಗೂ ಈ ವಿಮಾನ ನಿಲ್ದಾಣದಿಂದ ಅನುಕೂಲವಾಗಲಿದೆ ಎಂದರು.
ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಜತೆಗೆ ಅವರು ಪ್ರತಿನಿಧಿಸುತಿದ್ದ ಶಿಕಾರಿಪುರ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶಕ್ತಿಮೀರಿ ಯಡಿಯೂರಪ್ಪ ಅವರು ಶ್ರಮಿಸಲಿದ್ದಾರೆ ಎಂದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಆ ಬಗ್ಗೆ ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದರು.
Discussion about this post