ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ‘ದ ನ್ಯೂ ಇಂಡಿಯನ್ ಟೈಮ್ಸ್’ ಕೊಡಮಾಡುವ ಉತ್ತಮ ಪತ್ರಿಕೋದ್ಯಮ ವಿಭಾಗ ಎಂಬ ಪ್ರಶಸ್ತಿ ಲಭಿಸಿದೆ.
ದ ನ್ಯೂ ಇಂಡಿಯನ್ ಟೈಮ್ಸ್ ಮಾಧ್ಯಮ ಸಂಸ್ಥೆ ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಟಿಎನ್ಐಟಿ ಮಿಡೀಯಾ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಮಾಧ್ಯಮ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಎಂಬ ಪ್ರಶಸ್ತಿ ನೀಡಲಾಗಿದೆ. ಟಿಎನ್ ಐಟಿ ಮತ್ತು ಸಿರಿ ಕನ್ನಡ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ.
ವೇದಿಕೆಯಲ್ಲಿ ಸುದ್ದಿ ನಿರೂಪಕರಾದ ಚಂದನ್ ಶರ್ಮ, ರಾಘವ್ ಸೂರ್ಯ ಹಾಗೂ ಗಣೇಶ್ ಕಾಸರಗೋಡು ಪ್ರಶಸ್ತಿ ಘೋಷಿಸಿದರು. ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು.
ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳಿಗೆ ಮಾಧ್ಯಮ ಕುರಿತ ಶಿಕ್ಷಣ ಹಾಗೂ ತರಬೇತಿಯಲ್ಲಿ ದಾಪುಗಾಲು ಇಡುತ್ತಿದೆ. “ಕಳೆದ ಇಪ್ಪತ್ತು ವರ್ಷಗಳಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಸಹ್ಯಾದ್ರಿ ಟೈಮ್ಸ್’ ಹಾಗೂ ಕಳೆದ ಐದು ವರ್ಷದಿಂದ ಟೆಲಿವಿಷನ್ ಸ್ಟುಡಿಯೋ ಸಹಾಯದಿಂದ ವಿದ್ಯಾನ್ಮಾನ ಮಾಧ್ಯಮದ ತರಬೇತಿ ಹಾಗೂ ‘ಸಹ್ಯಾದ್ರಿ ಟಿವಿ’ ಯೂ ಟ್ಯೂಬ್ ಚಾನೆಲ್ ನ ತ್ವರಿತ ಬೆಳವಣಿಗೆಯನ್ನು ಗುರುತಿಸಿ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ” ಎಂದು ವಿಭಾಗದ ಮುಖ್ಯಸ್ಥ ಡಾ. ಸತ್ಯಪ್ರಕಾಶ್ ಎಂ ಆರ್ ಪ್ರತಿಕ್ರಿಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post