ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಸಮಾಜದ ಎಲ್ಲಾ ವರ್ಗದ ಜನರನ್ನ ತಲುಪುವಂತಹ ಸರ್ವಸ್ಪರ್ಶಿ ಆಡಳಿತವನ್ನು ನೀಡಿದೆ. ಜಿಲ್ಲೆ ರಚನೆಯಾದ ನಂತರ 17.30 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದಿರುವುದು ಮಹತ್ ಸಾಧನೆಯೇ ಸರಿ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ Minister Shashikala Jolle ಹೇಳಿದರು.
ಇಂದು ಹೊಸಪೇಟೆಯಲ್ಲಿ ಜಿಲ್ಲಾಡಳಿತ ದ ವತಿಯಿಂದ ಆಯೋಜಿಸಲಾಗಿದ್ದ ವಿಜಯನಗರ ಜಿಲ್ಲೆಯ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಸವರಾಜ ಬೊಮ್ಮಾಜಿ ಅವರ ನೇತೃತ್ವದ “ಡಬಲ್ ಇಂಜಿನ್” ಸರಕಾರಗಳು ಪಾರದರ್ಶಕತೆಯಿಂದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿವೆ. ಸರ್ಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ನೇರವಾಗಿ ಮುಟ್ಟಿಸಲು ಡಿಬಿಟಿ ಯಂತಹ ಕ್ರಾಂತಿಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇಂತಹ ಹಲವಾರು ಕ್ರಾಂತಿಕಾರಿ ವ್ಯವಸ್ಥೆಗಳ ಮೂಲಕ ಜನ ಸಾಮಾನ್ಯರು ತಮ್ಮ ಹಕ್ಕಿನ ಯೋಜನೆಯ ಪ್ರಯೋಜನಗಳ ಉಪಯೋಗಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗಿದೆ. ಇಂದು ಪಿಎಂ ಸ್ವನಿಧಿ, ರೈತ ವಿಧ್ಯಾ ನಿಧಿ, ರೈತ ಶಕ್ತಿ ಯೋಜನೆಗಳು ಡಿಬಿಟಿ ಮುಖಾಂತರವಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿವೆ. ದೇಶದ ಪ್ರಜೆಗಳೆಲ್ಲರ ಸರ್ವತೋಮುಖ ಅಭಿವೃದ್ದಿಗೆ ಕಂಕಣಬದ್ದವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಡಬಲ್ ಇಂಜಿನ್ ಸರ್ಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಭಾರತ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರಕಾರದ ಹಲವು ಯೋಜನೆಗಳ ಮೂಲಕ ಸಮಾಜದ ಕಟ್ಟ ಕಡೆಯ ಜನಸಾಮಾನ್ಯರನ್ನ ತಲುಪಿದ್ದೇವೆ ಎಂದರು.
ನೂತನ ವಿಜಯನಗರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆದ ಸುಮಾರು 20 ಸಾವಿರ ಜನ ಜಿಲ್ಲೆಯ ವಿವಿಧ ಭಾಗಗಳಿಂದ ಈ ಕಾರ್ಯಕ್ರಮ ಕ್ಕೆ ಆಗಮಿಸಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿಯಲ್ಲಿ ಜನನದಿಂದ ಮರಣದವರೆಗೂ ವಿವಿಧ ಇಲಾಖೆಗಳಿಂದ ಯೋಜನೆಗಳನ್ನು ಜಾರಿಗೊಳಿಸಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕಾರ್ಯಯೋಜನೆ ರೂಪಿಸಿ ಯಶಸ್ವಿಗೊಳಿಸಲಾಗಿದೆ. ಜಿಲ್ಲೆಯ ಹೊಸಪೇಟೆ ತಾಲ್ಲೂಕು ಸೇರಿದಂತೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ ಹಾಗೂ ಹೂವಿನ ಹಡಗಲಿ ಭಾಗದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲೆ ರಚನೆಯಾದ ನಂತರದಿಂದ ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ 17.30 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎನ್ನುವುದು ಹೆಮ್ಮೆಯ ವಿಷಯ ವಾಗಿದೆ ಎಂದು ಹೇಳಿದರು.
Also read: ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗಕ್ಕೆ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿಯ ಗರಿ
ವಿಜಯನಗರ ಜಿಲ್ಲೆ ನೂತನವಾಗಿ ಅಸ್ತಿತ್ವಕ್ಕೆ ಬಂದ ನಂತರದಿಂದ ಇದುವರೆಗೆ ವಿವಿಧ ಮೂಲಗಳಿಂದ ಒಟ್ಟಾರೆ ಯಾಗಿ 6,173 ಕೋಟಿ ರುಗಳಷ್ಟು ಬೃಹತ್ ಗಾತ್ರದ ಅನುದಾನವನ್ನು ಒದಗಿಸಲಾಗಿದೆ. ಈ ಅನುದಾನದಲ್ಲಿ ಒಟ್ಟು 99,287 ಕಾಮಗಾರಿಗಳನ್ನ ಪ್ರಾರಂಭಿಸಲಾಗಿದ್ದು, ಅದರಲ್ಲಿ 68,474 ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. ಇನ್ನುಳಿದ 30,813 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಮರಿಯಮ್ಮನ ಹಳ್ಳಿ ಪಟ್ಟಣಕ್ಕೆ ಸುಮಾರು 77 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಸದ್ಯದಲ್ಲೇ ಯೋಜನೆಯ ಅನುಷ್ಠಾನ ಪ್ರಾರಂಭಗೊಳ್ಳಲಿದೆ. ಇದರಿಂದ ಪಟ್ಟಣದ 11 ಸಾವಿರ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ ಎಂದರು.
ನರೇಂದ್ರಮೋದಿ ಜಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದಾರೆ. ಈ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದ್ದಾರೆ ಎಂದರು.
ಚಿತ್ರದುರ್ಗದಲ್ಲಿ ನಡೆದಂತಹ ಮೊದಲ ಫಲಾನುಭವಿ ಸಮಾವೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿದ್ದು, ಅವರಲ್ಲಿ ಶೇಡಕಾ 70 ರಷ್ಟು ಮಹಿಳೆಯರೇ ಆಗಿದ್ದು ವಿಶೇಷ. ಇದು ನಮ್ಮ ಸರ್ಕಾರದ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಆಡಳಿತಕ್ಕೆ ಇದು ಸಾಕ್ಷಿ. ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವ ಮೂಲಕ ಜನ ಸಾಮಾನ್ಯರನ್ನ ಸರ್ವತೋಮುಖವಾಗಿ ಸಧೃಢಗೊಳಿಸುವಲ್ಲಿ ಹೆಜ್ಜೆಯನ್ನಿಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಡಬಲ್ ಇಂಜಿನ್ ಸರಕಾರಗಳು ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದರು.
ಕಾರ್ಯಕ್ರಮವನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟಿಸಿದರು. ಸಚಿವ ಆನಂದ್ ಸಿಂಗ್, ಹಾಲಪ್ಪ ಆಚಾರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post