ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಅನೇಕ ಸಾಧು ಸಂತರು ಮತ್ತು ಸಾಧಕರು ದೇಶದ ಐಕ್ಯತೆ ಮತ್ತು ಶಾಂತಿಗಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತಾ ಇರುವುದರಿಂದ ನಮ್ಮ ದೇಶ ಮಾತ್ರವಲ್ಲದೆ ಈಡೀ ವಿಶ್ವವೇ ಶಾಂತಿಯಿಂದ ಇದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಸಮಾಜದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಂಚಾಚಾರ್ಯರು ವಿಶ್ವಕ್ಕೆ ಶಾಂತಿಯನ್ನು ಭೋದಿಸಿದವರು. ಸಮಾಜದ ಏಳಿಗೆಗಾಗಿ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರ ತತ್ವ ಸಿದ್ದಾಂತಗಳನ್ನು ಸ್ವಲ್ಪಮಟ್ಟಿಗಾದರೂ ನಾವು ಅಳವಡಿಸಿಕೊಳ್ಳಬೇಕು. ಅವರು ತೋರಿಸಿದ ಮಾರ್ಗದಲ್ಲಿ ಮುಂದುವರಿಯಬೇಕು. ಸಮಾಜ ಸಂಘಟಿತವಾಗಿ ಇನ್ನು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು ಎಂದರು.
ಮಹಾಪುರುಷರ ತ್ಯಾಗ ಮತ್ತು ಪ್ರಯತ್ನದಿಂದಾಗಿ ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ವಿಶ್ವಮಾನ್ಯವಾಗಿದೆ. ಪಂಚಾಚಾರ್ಯರ ಕೊಡುಗೆ ಅಪಾರ ಎಂದರು.
ವಿಶ್ರಾಂತ ಪಾಚಾರ್ಯರಾದ ಬಿಟಿಎಂ ಗುರುಸಿದ್ಧಶಾಸ್ತ್ರಿಗಳು ಉಪನ್ಯಾಸ ನೀಡಿ ಪಂಚಾಚಾರ್ಯರು ಎಲ್ಲಾ ಯುಗಗಳಲ್ಲೂ ಬೇರೆ ಬೇರೆ ಹೆಸರಿನಲ್ಲಿ ಅವತಾರ ಮಾಡಿ ಧರ್ಮಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಮನುಷ್ಯನ ಏಳಿಗೆಗೆ ಬೇಕಾದ ಮತ್ತು ವಿಶ್ವದ ಶಾಂತಿಗೆ ಬೇಕಾದ ಎಲ್ಲಾ ತತ್ವಗಳಿಗೆ ಬಸವೇಶ್ವರರು ಮತ್ತು ಪಂಚಾಚಾರ್ಯರು ವೀರಶೈವ ಧರ್ಮದ 2 ಕಣ್ಣುಗಳಿದ್ದ ಹಾಗೆ. ಗಾಂಧೀಜಿ ಕೂಡ ವೀರಶೈವ ಧರ್ಮದ ತತ್ವವನ್ನೇ ದೇಶದ ಸಮಸ್ತ ಅಭಿವೃದ್ಧಿಗೆ ಸಾಕು ಎಂದಿದ್ದರು. 10 ಸೂತ್ರಗಳ ಮೂಲಕ ಇಡೀ ಜಗತ್ತು ಯಾವ ರೀತಿಯ ಸಾಧನೆ ಮಾಡಬೇಕು ಎಂಬುದನ್ನು ಪಂಚಾಚಾರ್ಯರು ತಿಳಿಸಿದ್ದಾರೆ.
ಮೊದಲು ಲಿಂಗದೀಕ್ಷೆ ಪಡೆಯಬೇಕು. ಜಂಗಮ ಕೇವಲ ಪೂಜೆ ಮಾಡಿದರಷ್ಟೇ ಸಾಲದು. ಆಚಾರ ವಿಚಾರಗಳಿಂದ ಆತ ಜಂಗಮನಾಗಬೇಕು. ವಿಜ್ಞಾನ ತಂತ್ರಜ್ಞಾನದಿಂದ ಶಾಂತಿ ಸಾಧ್ಯವಿಲ್ಲ. ಆಧ್ಯಾತ್ಮ ಮತ್ತು ವಿಜ್ಞಾನವಿದ್ದರೆ ಮಾತ್ರ ಜಗತ್ತಿನಲ್ಲಿ ಶಾಂತಿ ಇರುತ್ತದೆ ಎಂಬುದನ್ನು ಪಂಚಾಚಾರ್ಯರು ತಿಳಿಸಿಕೊಟ್ಟಿದ್ದಾರೆ. ಹಿಂದಿನಿಂದಲೂ ಜಂಗಮರು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದು, ಕಷ್ಟದಿಂದ ಬದುಕನ್ನು ನಡೆಸುತ್ತಿದ್ದಾರೆ. ಹಾಗಾಗಿ ಅವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯಿದ್ದು, ಸರ್ಕಾರದ ಪ್ರತಿನಿಧಿಗಳು ಕೂಡಲೇ ಜಂಗಮರಿಗೆ ಪರಿಶಿಷ್ಟ ವರ್ಗಕ್ಕೆ ಸೇರಿಸಿ ಪ್ರಮಾಣ ಪತ್ರ ನೀಡಬೇಕು. ಬ್ರಿಟೀಷರ ಕಾಲದಿಂದಲೂ ಬೇಡ ಜಂಗಮ ಸಮಾಜ ಅತ್ಯಂತ ಹಿಂದುಳಿದಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತರೀಕೆರೆ ಹಿರೇಮಠದ ಶ್ರೀ ಷ.ಬ್ರ.ಜಗದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಶಾಸಕ ಆಯನೂರು ಮಂಜುನಾಥ್ ರವರು ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಡಾ.ಕೊಟ್ಟೂರೇಶ್ ರಾಸ್ತಾಪುರ ಮಠ ಹಾಗೂ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷರಾದ ಹೆಚ್.ಮಲ್ಲಿಕಾರ್ಜುನ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಅಡವೀಶಯ್ಯ, ವೀರಸಂಗಯ್ಯ ಬಿದರೆ, ಹೆಚ್.ಶಶಿಧರ್, ನಿಂಗರಾಜು, ಲೋಕೇಶ್ ಹೆಚ್.ಎಂ., ಎಂ.ಈ.ಸುಜಯ ಪ್ರಸಾದ್, ಜಗದೀಶ್ವರಯ್ಯ ಎಂ.ಮುದವಾಲ, ಸುನಂದ ಎಂ ವಿಜಯಕುಮಾರ್, ಜ್ಯೋತಿ ನಾಗರಾಜಯ್ಯ, ಉಮೇಶ್ ಹಿರೇಮಠ್, ರಶ್ಮಿ ಮಲ್ಲಿಕಾರ್ಜುನ ಸ್ವಾಮಿ ಮೊದಲಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















