ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಂಚಗವ್ಯ ಚಿಕಿತ್ಸೆ ಇತ್ತೀಚೆಗೆ ಪ್ರಚಲಿತವಾಗುತ್ತಿದ್ದು, ಆಯುರ್ವೇದದ ಪ್ರಮುಖ ಚಿಕಿತ್ಸೆಯಾಗಿದೆ ಎಂದು ಪಂಚಗವ್ಯ ಚಿಕಿತ್ಸಕ ಡಾ. ಡಿ.ಪಿ. ರಮೇಶ್ ಹೇಳಿದರು.
ಅವರು ಇಂದು ಕೋಟೇ ರಸ್ತೆಯಲ್ಲಿರುವ ವಾಸವಿ ಶಾಲೆಯಲ್ಲಿ ಗೋಸೇವಾ ಗತಿ ವಿಧಿ ನಗರ ಘಟಕದಿಂದ ಆಯೋಜಿಸಿದ್ದ ಉಚಿತ ಪಂಚಗವ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪಂಚಗವ್ಯ ಚಿಕಿತ್ಸೆಯು ಹಸುವಿನ ಹಾಲು, ಮೊಸರು, ತುಪ್ಪ, ಮೂತ್ರ ಮತ್ತು ಸಗಣಿಯಿಂದ ಪಡೆದ ಐದು ಉತ್ಪನ್ನಗಳ ಒಂದು ಶ್ರೇಷ್ಠ ಸಾಮೂಹಿಕ ಹೆಸರಾಗಿದೆ. ಈ ಚಿಕಿತ್ಸೆಯಿಂದ ಹಲವು ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಗೋಮೂತ್ರ ಎಂಬುದು ಇತ್ತೀಚೆಗೆ ಹಲವು ಸಂಶೋಧನೆಗಳಿಗೆ ಒಳಪಟ್ಟಿದ್ದು, ಆಯುರ್ವೇದ ಅಧ್ಯಯನಗಳ ಪಠ್ಯದಲ್ಲಿಯೂ ಸೇರ್ಪಡೆಯಾಗಿದೆ ಎಂದರು.
ಹಲವು ವೈದ್ಯಪದ್ಧತಿಗಳನ್ನು ನಾವು ನೋಡಿದ್ದೇವೆ. ಹೊಸ ಹೊಸ ಚಿಕಿತ್ಸಾ ಪದ್ಧತಿಗಳು ಸೇರಿಕೊಂಡಿವೆ. ಅದರಲ್ಲಿ ಬಹು ಹಳೆಯ ಪದ್ಧತಿಯಾದ ಆಯುರ್ವೇದ ಪದ್ಧತಿಯಿಂದ ಹಲವು ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸಬಹುದಾಗಿದೆ. ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಕೂಡ ಇದು ಗುಣಪಡಿಸುತ್ತದೆ. ಮಂಡಿನೋವು, ಅಸ್ತಮಾ, ಮಧುಮೇಹ, ಥೈರಾಯಿಡ್ ಸೇರಿದಂತೆ ಹಲವು ಕಾಯಿಲೆಗಳನ್ನು ಇದು ಗುಣಪಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಸ್.ಕೆ. ಶೇಷಾಚಲ, ರಾಜು, ಡಾ. ಮೈಥಿಲಿ ಸೇರಿದಂತೆ ಹಲವರಿದ್ದರು.
ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಸಮರ: ತೀ.ನ. ಶ್ರೀನಿವಾಸ್
ಹೈಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದುರುದ್ದೇಶದಿಂದ ಸೊರಬ ತಾಲೂಕಿನ ತಾಳಗುಪ್ಪದಲ್ಲಿ ಅಡಿಕೆ ತೋಟಗಳನ್ನು ಕಡಿದಿರುವ ನಾಲ್ವರು ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಇಲಾಖೆಗೆ ಈ ಜಾಗ ಸೇರಿದ್ದರೆ ಸರ್ವೇ ಮಾಡಿ ಜಾಗವನ್ನು ಸ್ವಾಧೀನಕ್ಕೆ ಪಡೆಯುವಂತೆ ಸೂಚಿಸಲಾಗಿತ್ತು. ಅಡಿಕೆ ತೋಟವನ್ನು ಕಡಿದು ನಾಶಪಡಿಸುವಂತೆ ಆದೇಶದಲ್ಲಿ ಹೇಳಿರಲಿಲ್ಲ. ಅಡಿಕೆ ಮರ ಕಡಿದಿರುವ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವಕೀಲರು ತಿಳಿಸಿದ್ದಾರೆ ಎಂದರು.
ಅಡಿಕೆ ಮರಗಳನ್ನು ಕಡಿಯಲು ಕಾರಣರಾದ ಸಾಗರ ಡಿಎಫ್‌ಓ, ಎಸಿಎಫ್ ಶಿರಾಳಕೊಪ್ಪ ಆರ್‌ಎಫ್‌ಓ ಹಾಗೂ ಫಾರೆಸ್ಟರ್ ವಿರುದ್ಧ ಕೇಸು ಹಾಕಿ ಕಾನೂನು ಸಮರ ನಡೆಸಲಾಗುತ್ತದೆ ಎಂದ ಅವರು, ೩ ಎಕರೆ ಒಳಗೆ ಅರಣ್ಯ ಭೂಮಿ ಸಾಗುವಳಿ ಮಾಡಿದ್ದರೆ ಅದಕ್ಕೆ ತೊಂದರೆ ನೀಡಬಾರದೆಂಬ ನಿಯಮ ಇದ್ದರೂ ಕೂಡ ಅದನ್ನು ಪರಿಗಣಿಸಲಿಲ್ಲ. ಜಿಲ್ಲಾಧಿಕಾರಿ ಹಾಗೂ ಸಿಸಿಎಫ್ ಕೂಡ ಕರ್ತವ್ಯಲೋಪ ಮಾಡಿದ್ದಾರೆಂದು ದೂರಿದರು.
ತೋಟ ಕಡಿದಿರುವ ಬಗ್ಗೆ ಅಧಿಕಾರಿಗಳು ಕ್ಷಮೆ ಕೇಳಬೇಕು. ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಅವರು, ಒತ್ತುವರಿ ತೆರವಿನ ವಿರುದ್ಧ ಮಧು ಬಂಗಾರಪ್ಪ ಕಾಂಗ್ರೆಸ್ ಕಚೇರಿಯಲ್ಲಿ, ಹರತಾಳು ಹಾಲಪ್ಪ ವಿಧಾನಸೌಧದಲ್ಲಿ ರಕ್ತ ಕ್ರಾಂತಿ ಮಾಡುವುದಾಗಿ ಘೋಷಿಸುತ್ತಾರೆ. ಇವರಿಂದ ಕ್ಷೇತ್ರದ ರೈತರಿಗೆ ನೆಮ್ಮದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡು ರೈತ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಧಮೇಂದ್ರ ಶಿರವಾಳ ಮಾತನಾಡಿ, ಶಿರಾಳಕೊಪ್ಪ ಅರಣ್ಯಾಧಿಕಾರಿ ವಿಜಯಕುಮಾರ ಜೆ.ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿ ಹಣ ಲಪಟಾಯಿಸಿದ್ದಾರೆ ಎಂದು ದೂರಿದರು.
ಶಿಕಾರಿಪುರ ತಾಲೂಕು ಬಿಸಲಹಳ್ಳಿ ಸರ್ವೆ ನಂಬರ್ 128, ದೋಣನಗುಡ್ಡ ಸನಂ 10, ಬಸವ ನಂದಿಹಳ್ಳಿ ಸನಂ 46ರಲ್ಲಿ 90 ಹೆಕ್ಟೇರ್, ಖೌಲಿ ಸನಂ 128ರಲ್ಲಿ 40 ಹೆಕ್ಟೇರ್, ಹುಲ್ಲಿನಕೊಪ್ಪ ಸನಂ. 30ರಲ್ಲಿ 16 ಹೆಕ್ಟೇರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಗಿಡ ನೆಡಲು ಗುಂಡು ತೋಡಿರುವುದಾಗಿ ಬಿಲ್ ಪಡೆದಿದ್ದಾರೆ ಎಂದರು.
ಸೊರಬ ಮಾರ್ಗದ ಬಾಳೆಕೊಪ್ಪ-ಚಿಕ್ಕಬೋರ್ 3 ಕಿಮೀಯಲ್ಲಿ 900 ಗಿಡ ನೆಡಲು, ತಡಗಣಿ-ಮಳಲಿಕೊಪ್ಪ ರಸ್ತೆಯಲ್ಲಿ 6 ಕಿಮೀ. ಗಿಡ ನೆಡಲು 1200, ಹಿರೇಮಾಗಡಿ-ಬಾಳೆಕೊಪ್ಪ ಮಾರ್ಗದ 3 ಕಿಮೀಯಲಿ 900 ಗಿಡ ನೆಡಲು ಗುಂಡಿ ತೋಡಿದ್ದಾಗಿ ಹಣ ಪಡೆದಿದ್ದಾರೆ. ಆದರೆ ವಾಸ್ತವವಾಗಿ ಗುಂಡಿಗಳನ್ನೇ ತೋಡಿಲ್ಲ. ಗಿಡಗಳನ್ನು ನೆಟ್ಟಿಲ್ಲ. ಈ ಸಂಬಂಧ ಸಿಸಿಫ್‌ಗೆ ದೂರು ನೀಡಿದರೆ ಭ್ರ?ಚಾರ ಮಾಡಿದ ಅಧಿಕಾರಿಯನ್ನೇ ಕಳಿಸಿ ಪರಿಶೀಲನೆಗೆ ಸೂಚಿಸಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪುರಾತತ್ವ ಇಲಾಖೆಗೆ ಸೇರಿದ ಕದಂಬರ ಕಾಲದ ದೇವಸ್ಥಾನದ ಬಳಿಯೂ ಗುಂಡಿ ತೆಗೆದು ಪುರಾತತ್ವ ಇಲಾಖೆಗೆ ಸ್ವತ್ತಿಗೆ ಹಾನಿ ಮಾಡಿದ್ದಾರೆ. ಇಂತಹ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸಿಸಿಎಫ್ ಕಚೇರಿ ಮುಂದೆಯೇ ಸಂಘಟನೆಯ ವತಿಯಿಂದ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ನಾರಗೋಡು, ಮುಕ್ತಿಯಾರ್ ಅಹಮ್ಮದ್, ಲಕ್ಷ್ಮಣ ಸೊರಬ, ನಾರಾಯಣಪ್ಪ, ಪ್ರವೀಣ್ ಇದ್ದರು.
ರಾಜ್ಯ ಮಡಿವಾಳರ ಸಂಘದ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಜೆ. ಹಿರಣ್ಣಯ್ಯ ನೇಮಕ
ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಜೆ. ಹಿರಣ್ಣಯ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಪ್ರಮೋದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಯುವ ಘಟಕದ ರಾಜ್ಯಾಧ್ಯಕ್ಷ ಸಿ. ನಂಜಪ್ಪ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಈ ನೇಮಕಾತಿಆದೇಶ ಹೊರಡಿಸಿದ್ದು, ಸಮುದಾಯದ ಜಾಗೃತಿ ಮೂಡಿಸಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಸಂಘದ ಮತ್ತು ಸಮಾಜದ ಏಳಿಗೆಗೆ ಸಹಕರಿಸುತ್ತೇವೆ ಎಂದು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಸತ್ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹ ಹಿನ್ನೆಲೆ ವೈ.ಹೆಚ್. ನಾಗರಾಜ್ ಖಂಡನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅನ್ಯಾಯ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಅಡಗಿರುವುದು ಈಗ ಸ್ಪಷ್ಟವಾಗಿದೆ ವಿರೋಧ ಪಕ್ಷಗಳನ್ನು ಬಗ್ಗು ಬಡಿಯುವ, ದ್ವೇಷ ಸಾಧಿಸುವ ಇಂತಹ ಕೆಲಸಗಳು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ರಾಹುಲ್ ಅಂತಹ ತಪ್ಪನ್ನು ಮಾಡಿಲ್ಲ. ಈ ದೇಶದಲ್ಲಿ ಎಂತೆಂತಹ ತಪ್ಪುಗಳನ್ನು ಮಾಡುತ್ತಲೇ ಇರುವವರು ಅತ್ಯಂತ ಸುರಕ್ಷಿತವಾಗಿ ಇದ್ದಾರೆ.
ದೇಶದ ವಿರೋಧ ಪಕ್ಷದ ನಾಯಕರೊಬ್ಬರನ್ನು ಈ ರೀತಿ ವಜಾ ಮಾಡಿರುವ ಕ್ರಮವನ್ನು ಇಡೀ ವಿಶ್ವವೇ ನೋಡುತ್ತಿದೆ ರಾಹುಲ್ 2024ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂಬ ದೂರದ ದುರಾಲೋಚನೆಯೂ ಇದರ ಹಿಂದೆ ಅಡಗಿದೆ.
ದುರುದ್ದೇಶದ ಇಂತಹ ರಾಜಕೀಯ ತೀರ್ಮಾನಗಳು ಈ ದೇಶಕ್ಕೆ ದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ. ಸರ್ವಾಧಿಕಾರ ಇರುವ ದೇಶಗಳಲ್ಲೇ ಈ ರೀತಿಯ ಘಟನೆಗಳು ನಡೆಯುದಿಲ. ಆದರೆ ಭಾರತದಂತಹ ಬಹುದೊಡ್ಡ ಗಟ್ಟಿ ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿ ನಡೆಯುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಇಂದು ಇಡೀ ದೇಶ ಆತಂಕ, ತಲ್ಲಣದಲ್ಲಿದೆ ಉದ್ಯೋಗಗಳು ನಶಿಸಿ ಹೋಗುತ್ತಿವೆ, ಬೆಲೆ ಏರಿಕೆಯಿಂದ ಬಡವರು ತತ್ತರಿಸಿ ಹೋಗಿದ್ದಾರೆ. ಒಂದು ಸಣ್ಣ ಕಾರಣಕ್ಕೆ ಅನರ್ಹಗೊಳಿಸುವುದೇ ಆದರೆ ಸಂಸತ್ತಿನಲ್ಲಿ ಇಂದು ಬಹುಪಾಲು ಸಂಸದರು ಅನರ್ಹಗೊಳ್ಳಬೇಕಿತ್ತು. ಶಿವಮೊಗ್ಗವನ್ನೇ ಉದಾಹರಣೆಗೆ ತೆಗೆದುಕೊಂಡರೆ ಕೆ.ಎಸ್. ಈಶ್ವರಪ್ಪನಂತವರು ಎಂದು ಮಾತನಾಡಿದ್ದಾರೆ ನಗರದ ಶಾಂತಿಯನ್ನು ಕದಡಿದ್ದಾರೆ. ಧರ್ಮಗಳ ಮಧ್ಯೆ ವಿ?ಬೀಜ ಬಿತ್ತಿದ್ದಾರೆ. ಆದರೆ ಅವರನ್ನು ಏನೂ ಮಾಡಿಕೊಳ್ಳಲಾಗಿಲ್ಲ ಮನುಷ್ಯ ಪ್ರೀತಿ ಮರೆತವರನ್ನು ಮತ್ತೆ ಮತ್ತೆ ವಿಜೃಂಭಿಸುತ್ತಿರುವುದು ಈ ದೇಶದ ವ್ಯವಸ್ಥೆಯ ಒಂದು ಭಾಗವಾಗಿದೆ. ಅಧರ್ಮ, ಅನ್ಯಾಯ, ಅನೀತಿ, ಅಕ್ರಮ, ಆಸೆ, ಅಹಂಕಾರ, ಅತಿರೇಕ, ಅಧ್ವಾನ, ಅಶಿಸ್ತುಗಳೇ ಬಿಜೆಪಿಯ ತತ್ವ ಸಿದ್ಧಾಂತಗಳಾಗಿವೆ. ಪ್ರಜಾಪ್ರಭುತ್ವವನ್ನು ಕಸಿದುಕೊಂಡಿರುವ ಬಿಜೆಪಿಯ ವರಿಷ್ಟರಿಗೆ ಬಡವರ ವೋಟನ್ನು ಕಸಿದುಕೊಳ್ಳುವುದು ಯಾವ ಲೆಕ್ಕ?
ಉಸಿರುಗಟ್ಟುತ್ತಿರುವ ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ನೀಡಿ ಬದುಕಿಸಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಭ್ರಷ್ಟಾಚಾರ ಹಿನ್ನೆಲೆ: ತನಿಖೆಗೆ ಆಗ್ರಹ
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದರ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಾನ ಮನಸ್ಕರ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖಂಡ ಕೆ.ಎಲ್. ಅಶೋಕ್ ಮಾತನಾಡಿ, ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಲೋಕಾಯುಕ್ತ ಐಜಿಗೆ ಇದೀಗ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಡೆಸಲಾದ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಲಕ್ಷಾಂತರ ರೂ. ಭ್ರಷ್ಟಾಚಾರ ನಡೆದಿದ್ದರೂ ಇದಕ್ಕೆ ಸಂಬಂಧಿಸಿದ ದಾಖಲೆ ಇರುವುದಿಲ್ಲ. ಹೀಗಾಗಿಯೇ ಲೋಕಾಯುಕ್ತ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಕೂಡ ಮಧ್ಯ ಪ್ರವೇಶಿಸಿ ಹಗರಣದ ತನಿಖೆ ನಡೆಸಬೇಕು. ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಬೇಕೆಂದು ಒತ್ತಾಯಿಸಿದರು.
ಹಗರಣದಲ್ಲಿ ತಪ್ಪಿತಸ್ಥರು ಯಾರೇ ಕಂಡುಬಂದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರನ್ನು ವಜಾ ಮಾಡಬೇಕು. ಸಂತ್ರಸ್ತರಿಗೆ ಇದೀಗ ಬೇದರಿಕೆ ಕರೆಗಳು ಬರುತ್ತಿದೆ. ಅವರಿಗೂ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದೆಲ್ಲದರ ಹಿಂದೆ ಕಾಣದ ಕೈಗಳು ಸಾಕ? ಕೆಲಸ ಮಾಡುತ್ತಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು. ನಾವು ಕೂಡ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸುತ್ತಿದ್ದೇವೆ. ನಮಗೆ ನ್ಯಾಯ ದೊರಕುತ್ತದೆ ಎಂಬ ಭರವಸೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಕೆ. ಕುಮಾರ್, ಗೋಪಿ, ಅರುಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post