ಕಲ್ಪ ಮೀಡಿಯಾ ಹೌಸ್ | ತುಮಕೂರು |
ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸಿನೀಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ತುಮಕೂರಿನ ಕ್ಯಾತಸಂದ್ರದ ಟೋಲ್ ಬಳಿ ವಿರೂಪಾಕ್ಷಪ್ಪ ತೆರಳುತ್ತಿದ್ದ ಕಾರನ್ನು ಬೆನ್ನಟ್ಟಿ ಅಡ್ಡ ಹಾಕುವಲ್ಲಿ ಯಶಸ್ವಿಯಾದ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಲಂಚ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಜಾಮೀನು ಪಡೆದಿದ್ದರು. ಆದರೆ, ಲೋಕಾಯುಕ್ತ ಪೊಲೀಸರ ತನಿಖೆಗೆ ಇವರು ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿರೂಪಾಕ್ಷಪ್ಪ ಅವರಿಗೆ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ವಿರೂಪಾಕ್ಷಪ್ಪ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು. ಅಂತಿಮವಾಗಿ ತುಮಕೂರು ಬಳಿಯಲ್ಲಿ ಇವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಮಾರ್ಚ್ 2 ರಂದು ಮಾಡಾಳು ವಿರೂಪಾಕ್ಷಪ್ಪ ಪುತ್ರ, ಬಿಡಬ್ಲ್ಯೂಎಸ್‌ಎಸ್‌ಬಿ ಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ಅವರನ್ನು, ಬೆಂಗಳೂರಿನ ಕಚೇರಿಯಲ್ಲಿ ತಂದೆಯ ಪರವಾಗಿ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಕೋಟ್ಯಾಂತರ ರೂ. ವಶಕ್ಕೆ ಪಡೆದಿದ್ದರು.
ಪುತ್ರನ ಬಂಧನವಾದ ನಂತರ, ಪ್ರಕರಣದ ಮೊದಲ ಆರೋಪಿಯಾಗಿದ್ದ ಮಾಡಾಳು ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದರು. ಅವರಿಗೆ ಮಾ.7 ರಂದು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜಾಮೀನು ದೊರಕಿದ ನಂತರ ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಬೃಹತ್ ರೋಡ್ ಶೋ ಕೂಡ ನಡೆಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















