ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಒಳ ಮೀಸಲಾತಿ ಶಿಫಾರಸ್ಸು ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ರಾಜಕೀಯ ಪ್ರೇರಿತ ಹಾಗೂ ರೌಡಿಗಳ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಪ್ರಮುಖರೊಂದಿಗೆ ನಿನ್ನೆಯ ಘಟನೆ ಕುರಿತು ಮಾಹಿತಿ ಪಡೆದು, ಚರ್ಚೆ ನಡೆಸಿದ ನಂತರ ಅವರು ಮಾತನಾಡಿದರು.
ಚುನಾವಣೆ ಸಂದರ್ಭವಾಗಿರುವುದರಿಂದ ಈ ದಾಳಿಯಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಯತ್ನಿಸಿದ್ದು, ಇದಕ್ಕೆ ರೌಡಿಗಳ ಕುಮ್ಮಕ್ಕೂ ಸಹ ಇರುವುದು ಕಂಡು ಬಂದಿದೆ. ಪ್ರಚೋಚನೆಯಿಂದಾಗಿ ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ದಾಳಿ ನಡೆದಿದೆ. ಪ್ರಕರಣ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
Also read: ಕುಂಚೇನಹಳ್ಳಿಯಲ್ಲಿ ರಸ್ತೆ ತಡೆ, ಟೈರ್’ಗೆ ಬೆಂಕಿ ಹಚ್ಚಿ ಪ್ರತಿಭಟನೆ: ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್
ರೌಡಿ ಶೀಟರ್’ಗಳ ಕುಮ್ಮಕ್ಕು
ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಹಲವರು ರೌಡಿ ಶೀಟರ್’ಗಳಿರುವುದು ಕಂಡು ಬಂದಿದೆ. ಹೀಗಾಗಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಯಾವುದೇ ವಿಚಾರವಿದ್ದರೂ ಪ್ರತಿಭಟನೆ ನಡೆಸಲು, ಮನವಿ ಕೊಡಲು ಎಲ್ಲರಿಗೂ ಹಕ್ಕಿದೆ. ಆದರೆ, ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಕಲ್ಲು ಹೊಡೆಯುವುದು, ಪೊಲೀಸರು ಮೇಲೆ ದಾಳಿ ನಡೆಸುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದರು.
ಬಂಜಾರ ಸಮುದಾಯಕ್ಕೆ ಬಿಎಸ್’ವೈ ಕೊಡುಗೆ
ಮೊದಲಿನಿಂದಲೂ ಬಂಜಾರ ಸಮುದಾಯ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರು ಶ್ರಮಿಸಿದ್ದಾರೆ. ಈ ಸಮುದಾಯಗಳಿಗಾಗಿ ಬಹಳಷ್ಟು ಕೊಡುಗೆ ನೀಡಿದ್ದಾರೆ. ಆದರೂ ಸಹ ಯಾರದ್ದೋ ಪ್ರಚೋದನೆ ಹಾಗೂ ತಪ್ಪು ತಿಳುವಳಿಕೆಯಿಂದ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದರೂ ಸಹ ದಾಳಿ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಬೇಡಿ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















