ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೇ 10ರಂದು ನಡೆಯಲಿರುವ 111-ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸೂಡಾ ಆಯುಕ್ತ ಕೊಟ್ರೇಶ್ ಹೆಚ್. ಅವರು ಹೇಳಿದರು.
ಅವರು ಇಂದು ತಾಲೂಕು ಚುನಾವಣಾ ಕಚೇರಿ ಕಾರ್ಯಾಲಯದಲ್ಲಿ ವಿಧಾನಸಭಾ ಚುನಾವಣಾ ಪೂರ್ವಸಿದ್ಧತೆಗಳ ಕುರಿತು ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. 2023ರ ಜನವರಿ 05ರಂದು ಪ್ರಕಟಗೊಂಡ ಅಂತಿಮ ಕರಡು ಪಟ್ಟಿಯಲ್ಲಿ ಗುರುತಿಸಲಾಗಿರುವಂತೆ 1,03,534 ಪುರುಷರು, 1,04,525 ಮಹಿಳೆಯರು, ಇತರೆ ಮೂರು ಮಂದಿ ಸೇರಿದಂತೆ ಒಟ್ಟು 2,08,062ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಎಂದ ಅವರು, 2398ವಿಕಲಚೇತನರನ್ನು ಹಾಗೂ 3301 80+ ವಯೋಮಿತಿಯ ಮತದಾರರನ್ನು ಗುರುತಿಸಲಾಗಿದೆ ಎಂದರು.
ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ ಹರಿಗೆ, ಮಲವಗೊಪ್ಪ, ಸೂಳೆಬೈಲು, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು(ಭಾಗಶಃ), ಆನವೇರಿ ಮತ್ತು ಕಲ್ಲಿಹಾಳ, ಶಿವಮೊಗ್ಗ ತಾಲೂಕು ವ್ಯಾಪ್ತಿಯ 37 ಮತ್ತು ಭದ್ರಾವತಿ ತಾಲೂಕಿನ 17ಪಂಚಾಯಿತಿಗಳು ಸೇರಿದಂತೆ ಒಟ್ಟು 54 ಗ್ರಾಮ ಪಂಚಾಯತಿಗಳು ಒಳಗೊಂಡಿವೆ. ಅಲ್ಲದೇ ಹೊಸದಾಗಿ ರಚನೆಗೊಂಡ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೊಳಪಡಲಿವೆ ಎಂದ ಅವರು, ಶಿವಮೊಗ್ಗ ತಾಲೂಕಿನಲ್ಲಿ 171 ಮತ್ತು ಭದ್ರಾವತಿ ತಾಲೂಕಿನಲ್ಲಿ 76 ಸೇರಿದಂತೆ ಒಟ್ಟು 247ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅವುಗಳ ಪೈಕಿ 26ಸೂಕ್ಷ್ಮ ಮತ್ತು 39 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದವರು ತಿಳಿಸಿದ್ದಾರೆ.
Also read: ಹಿಂದುತ್ವವನ್ನು ಮೈಗೂಡಿಸಿಕೊಂಡ ಈಶ್ವರಪ್ಪನವರಿಗೇ ಶಿವಮೊಗ್ಗ ಟಿಕೇಟ್ ನೀಡಿ: ವೆಂಕಟೇಶ್ ರಾವ್
ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಂದಿನಿಂದ ಏಪ್ರಿಲ್ 20ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 21ರಂದು ಉಮೇದುವಾರರು ಸಲ್ಲಿಸಿದ ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುವುದು. ಏಪ್ರಿಲ್ 24ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ನಗರದ ಸಹ್ಯಾದ್ರಿ ಕಲಾ ಪದವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಆಯ್ಕೆ ಬಯಸುವ ಉಮೇದುವಾರರು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಶಿವಮೊಗ್ಗ ತಾಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಅಕ್ರಮಗಳು ನಡೆಯದಂತೆ ನಿಯಂತ್ರಣ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಎಸ್.ಎಸ್.ಟಿ. 5ತಂಡಗಳನ್ನು ರಚಿಸಲಾಗಿದ್ದು, ಅಂತರ ಜಿಲ್ಲಾ ಗಡಿಯಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಎಫ್.ಎಸ್.ಟಿ. 5ತಂಡ, 08 ವಿಡಿಯೋ ಸರ್ವೇಲೆನ್ಸ್ ತಂಡ, ಮಾದರಿ ನೀತಿ ಸಂಹಿತೆ 01ತಂಡ, ಲೆಖ್ಖಪತ್ರ ವೀಕ್ಷಕರ 01 ತಂಡ ಹಾಗೂ ಅವರಿಗೆ ಸಹಾಯಕರಾಗಿ ಲೆಕ್ಕವೀಕ್ಷಕರ 01ತಂಡವನ್ನು ರಚಿಸಲಾಗಿದೆ. 25ಸೆಕ್ಟರ್ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಯಾವುದೇ ಪ್ರಕರಣಗಳ ಕುರಿತು ಮಾಹಿತಿ ನೀಡಲು ಹಾಗೂ ಸಾರ್ವಜನಿಕರಿಂದ ದೂರುಗಳನ್ನು ಪಡೆಯಲು ದಿನದ 24ಗಂಟೆಗಳು ಸಕ್ರಿಯವಾಗಿರುವಂತೆ 08182-200508 ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಕರೆ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ ಅಲ್ಲದೇ ಸಿವಿಜಲ್ ಆ್ಯಪ್ ನಲ್ಲಿಯೂ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಪರಶುರಾಮ ಸತ್ತಿಗೇರಿ, ಸಿ.ಡಿ.ಪಿ.ಒ. ಚಂದ್ರಪ್ಪ, ಅರುಣ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post