ಕಲ್ಪ ಮೀಡಿಯಾ ಹೌಸ್ | ಸೊರಬ |
ಬಲೂನು ಜೂಲಗಳ ಅಲಂಕೃತ ಎತ್ತುಗಳು, ಬಾಳೆಗಿಡ, ಹೂಗಳ ಸಿಂಗಾರಿಸಿದ ಎತ್ತಿನಗಾಡಿಯಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ ಹೋರಾಟಗಾರ ಜೆ.ಎಸ್. ಚಿದಾನಂದಗೌಡ ಅವರು ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಹೋರಾಟಗಾರ ಎಂದೇ ಹೆಸರಾಗಿರುವ ಚಿದಾನಂದಗೌಡ ಅವರು ಎತ್ತಿನಗಾಡಿಯ ಮೂಲಕ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಪ್ರವೀಣ್ ಜೈನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಎಸ್. ಚಿದಾನಂದಗೌಡ ಅವರು, ಜನತೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿಯಿಂದ ಬೇಸತ್ತು ಹೋಗಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಸ್ಥಳೀಯರಾಗಿರುವ ಕಾರಣಕ್ಕೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಜನತೆ ತಮ್ಮ ಜನಪರ ಹೋರಾಟಗಳನ್ನು ಗಮನಿಸಿದ್ದಾರೆ. ತಮ್ಮನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದರೆ ರಾಜ್ಯ ರಾಜಧಾನಿಯಲ್ಲಿ ವಾಸ ಮಾಡದೇ, ಸೊರಬದಲ್ಲಿಯೇ ಇರುತ್ತೇನೆ. ಜೊತೆಗೆ ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಪ್ರತಿ ಹೋಬಳಿ ಮಟ್ಟದಲ್ಲಿ ರೈತ ವೃತ್ತ ಸ್ಥಾಪನೆ ಮತ್ತು ರೈತ ದಿನಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
Also read: ಸೊರಬದಲ್ಲಿ ಸಹೋದರರ ಸವಾಲ್! ಶಕ್ತಿ ಪ್ರದರ್ಶನದ ಮೂಲಕ ರಂಗೇರಿದ ಕ್ಷೇತ್ರದ ಕಣ
ಈ ಸಂದರ್ಭದಲ್ಲಿ ವೀರೇಂದ್ರಗೌಡ ಜೇಡಗೇರಿ, ಸದಾನಂದಗೌಡ ಜೇಡಗೇರಿ, ನಾರಾಯಣಪ್ಪ ಜೇಡಗೇರಿ, ಎಂ. ವೀರಭದ್ರ ಕಿರುಗುಣಸೆ, ಅಣ್ಣಾಜಿಗೌಡ ಜೇಡಗೇರಿ, ಧರ್ಮಪ್ಪ ಜೇಡಗೇರಿ, ಕಾಳಪ್ಪ ಜೇಡಗೇರಿ, ವೀರಭದ್ರ ಜಯಂತಿ ಗ್ರಾಮ, ಎಸ್.ಬಿ. ವಿನಯ್, ರಾಜು ಸಮನವಳ್ಳಿ, ಮಾಲತೇಶ್ ನಲ್ಲಿಕೊಪ್ಪ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post