ಕಲ್ಪ ಮೀಡಿಯಾ ಹೌಸ್ | ಬೀದರ್ |
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡುತ್ತೇವೆ. ಜೊತೆಗೆ ವರ್ಷಕ್ಕೆ ಐದು ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಗಳನ್ನು ಪ್ರತಿ ಮನೆಗೆ ನೀಡುತ್ತೇವೆ. ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ಮನವಿ ಮಾಡಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕರಕನಳ್ಳಿ, ಉಡಮನಳ್ಳಿ, ಕಾರಪಾಕಪಳ್ಳಿ, ಪೊಲಕಪಳ್ಳಿ, ಬೇಮಳಖೇಡ, ಭಂಗೂರ, ಮರಕುಂದಾ ಸೇರಿದಂತೆ ವಿವಿಧೆಡೆ ಸೋಮವಾರ ಸಂಜೆ ಮತಯಾಚನಾ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿ ಮಾತನಾಡಿದ ಅವರು, ನಾವು ಬಡವರ, ರೈತರ, ಶ್ರಮಿಕರ ಪರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಅವುಗಳ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ ಎಂದರು.
ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದ ಪಕ್ಷಗಳ ವಿರೋಧದ ನಡುವೆಯೂ ನಾವು ರೈತರ ಸಾಲಮನ್ನಾ ಮಾಡಿದ್ದೇವೆ. ಅಷ್ಟೇ ಅಲ್ಲದೇ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದೇವೆ. ರೈತರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವು. ಈ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ನಾವು ರೈತರ ಬೋರ್ವೆಲ್ ಗಳಿಗೆ 24 X 7 ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸುತ್ತೇವೆ.
ರೈತನ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹಧನ ನೀಡುತ್ತೇವೆ. ಅಷ್ಟೇ ಅಲ್ಲದೇ ರೈತರಿಗೆ ಖುರ್ಷಿ ಖರ್ಚಿಗಾಗಿ ವರ್ಷಕ್ಕೆ ಎಕರೆಗೆ ಹತ್ತು ಸಾವಿರ ರೂ.ಗಳಂತೆ ಹತ್ತು ಎಕರೆಯವರೆಗೆ ಸಹಾಯಧನ ನೀಡುತ್ತೇವೆ. ವಿವಿಧ ವೇತನಗಳನ್ನು ಹೆಚ್ಚಿಸಲಿದ್ದೇವೆ. ತಾವೆಲ್ಲರೂ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ:
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸೋಮವಾರ ಸಂಜೆ ಕರಕನಳ್ಳಿಯ ಶ್ರೀ ಗುರು ಗಂಗಾಧರ ಭಕ್ಕಪ್ರಭು ದೇವಾಲಯ, ಗುರು ದತ್ತೇಶ್ವರ ದೇವಸ್ಥಾನ, ಮಲ್ಲಪ್ಪ ಮಹಾರಾಜರ ಮಠಗಳಿಗೆ ಭೇಟಿ ನೀಡಿ ದರ್ಶನ ಪಡೆದು, ಚುನಾವಣಾ ಪ್ರಚಾರ ಆರಂಭಿಸಿದರು. ಪ್ರಚಾರದ ವೇಳೆಯಲ್ಲಿಯೇ ಅವರು, ಕರಕನಳ್ಳಿ, ಉಡಮನಳ್ಳಿ, ಕಾರಪಾಕಪಳ್ಳಿ, ಪೊಲಕಪಳ್ಳಿ, ಬೇಮಳಖೇಡ, ಭಂಗೂರ, ಮರಕುಂದಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
ಜೆಡಿಎಸ್ ಪಕ್ಷ ಸೇರಿದ ಬಿಜೆಪಿಯ ಪ್ರಮುಖರು:
ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮತಯಾಚನೆಯ ವೇಳೆ ಬೇಮಳಖೇಡ ಗ್ರಾಮದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾಗಿದ್ದ ರಾಜಕುಮಾರ ಬೀರನಳ್ಳಿ ಮತ್ತು ಅವರ ಬಳಗದವರು ಹಾಗೂ ವಿವಿಧ ಗ್ರಾಮಗಳಲ್ಲಿ ಪ್ರಮುಖರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರು ಜೆಡಿಎಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ನಡುವೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಮರಕುಂದಾ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಜೆಡಿಎಸ್ ಕಛೇರಿ ಉದ್ಘಾಟಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಬೇಮಳಖೇಡದ ಜೆಡಿಎಸ್ ಮುಖಂಡ ಹಣಮಂತರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಪ್ರಚಾರದುದ್ದಕ್ಕೂ ಪಕ್ಷದ ಮುಖಂಡರು, ಕಾರ್ಯಕರ್ತರು ಬಾಜಾ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post