ಕಲ್ಪ ಮೀಡಿಯಾ ಹೌಸ್ | ಬೀದರ್ |
ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್
Bandeppa Khashempur ಅಬ್ಬರದ ಪ್ರಚಾರದೊಂದಿಗೆ ಕ್ಷೇತ್ರ ಸಂಚಾರ ಮುಂದುವರಿಸಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಾತೋಳ್ಳಿ, ನಾಗೋರಾ, ಘೋಡಂಪಳ್ಳಿ, ಚಿಟ್ಟಾವಾಡಿ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಮತಯಾಚನಾ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿ ಮಾತನಾಡಿದ ಅವರು, ನಾನು ಮೂರು ಬಾರಿ ಶಾಸಕನಾಗಿ, ಎರಡು ಬಾರಿ ಸಚಿವನಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಬೀದರ್, ಬೀದರ್ ದಕ್ಷಿಣ ಕ್ಷೇತ್ರ, ಬೀದರ್ ಜಿಲ್ಲೆ, ರಾಜ್ಯದ ಅಭಿವೃದ್ಧಿಗಾಗಿ ಅನೇಕ ಮಹತ್ವದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ರೈತರ, ಬಡವರ, ಶ್ರಮಿಕರ ಪರ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ನೀಡಿದ್ದೇವೆ. ರೈತರ ಸಾಲಮನ್ನಾ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಕೂಡಲೇ ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಲಿದ್ದೇವೆ.
ರೈತರ ಬೋರ್ವೆಲ್ ಗಳಿಗೆ ದಿನದ ಇಪ್ಪತ್ನಾಲ್ಕು ತಾಸು ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಿದ್ದೇವೆ. ಅಷ್ಟೇ ಅಲ್ಲದೇ ರೈತರ ಕೃಷಿ ಕಾರ್ಯಗಳಿಗಾಗಿ ವರ್ಷಕ್ಕೆ ಎಕರೆಗೆ ಹತ್ತು ಸಾವಿರ ರೂ. ನಂತೆ ಹತ್ತು ಎಕರೆಯವರೆಗೂ ಸಹಾಯಧನ ನೀಡುತ್ತೇವೆ. ಕ್ಷೇತ್ರದ ಜನರು ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಮತ್ತೊಮ್ಮೆ ಅತಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು. ಚುನಾವಣಾ ಪ್ರಚಾರದ ನಡುವೆಯೇ ಅವರು ಗ್ರಾಮಗಳ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು. ವಿವಿಧೆಡೆ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅಜಾನ್ (ನಮಾಜ್) ಶಬ್ದ ಕೇಳಿ ಭಾಷಣ ನಿಲ್ಲಿಸಿದ ಖಾಶೆಂಪುರ್:
ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಾತೋಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡುತ್ತಿದ್ದ ವೇಳೆ ಹಜಾನ್ (ನಮಾಜ್) ಶುರುವಾಯಿತು. ನಮಾಜ್ ಶಬ್ದ ಕೇಳಿ ಬಂದ ತಕ್ಷಣವೇ ಶಾಸಕರು ಭಾಷಣ ನಿಲ್ಲಿಸಿದರು. ನಮಾಜ್ ಮುಗಿದ ಬಳಿಕ ಭಾಷಣ ಮುಂದುವರೆಸಿದರು.
ಈಗ ದೆವ್ವ ಗಾಳಿ ಬಿಟ್ಟಿಲ್ಲ, ಶಿವಗಾಳಿ ಬಿಟ್ಟಾದ ಶುಭವಾಗ್ತಾದ ಎಂದ ಅರ್ಚಕಿ:
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚುನಾವಣಾ ಪ್ರಚಾರದ ವೇಳೆಯಲ್ಲಿ ನಾಗೋರಾದ ಶ್ರೀ ಭಾಗ್ಯವಂತಿ ಭವಾನಿ ಮಂದಿರಕ್ಕೆ ಭೇಟಿ ನೀಡಿ ಮಾತೆಯ ಆಶೀರ್ವಾದ ಪಡೆದರು. ಈ ವೇಳೆ ಹೇಳಿಕೆ ನೀಡಿದ ದೇವಸ್ಥಾನದ ಅರ್ಚಕಿ ಈಗ ದೆವ್ವ ಗಾಳಿ ಬಿಟ್ಟಿಲ್ಲ, ಶಿವಗಾಳಿ ಬಿಟ್ಟಾದ. ನಿಮಗೆ ಶುಭವಾಗ್ತಾದ ಮಗ ಎಂದು ಹೇಳುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಗೆಲುವಿನ ಮುನ್ಸೂಚನೆ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

