ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ತೀವ್ರ ಕುತೂಹಲದಿಂದ ಜನರು ನಿರೀಕ್ಷಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಚುನಾವಣೆ ನಡೆದಿದೆ. ಒಟ್ಟಾರೆ ಜಿಲ್ಲೆಯಲ್ಲಿ 78.28 ಶೇಕಡವಾರು ಮತದಾನವಾಗಿದೆ. ತೀರ್ಥಹಳ್ಳಿಯಲ್ಲಿ ಶೇ.84.83, ಅತ್ಯಧಿಕ ಮತದಾನವಾಗಿದೆ. ಹಾಗೆಯೇ ಶಿಮೊಗ್ಗ ಗ್ರಾಮಾಂತರದಲ್ಲಿ ಶೇ.83.71ರಷ್ಟು ಮತದಾನವಾಗಿದೆ. ಉಳಿದಂತೆ ಭದ್ರಾವತಿ ಯಲ್ಲಿ 68.47, ಶಿವಮೊಗ್ಗ ನಗರದಲ್ಲಿ 68.74, ಶಿಕಾರಿಪುರದಲ್ಲಿ 82.57, ಸೊರಬದಲ್ಲಿ 82.97, ಸಾಗರದಲ್ಲಿ 80.29ರಷ್ಟು ಮತದಾನವಾಗಿದೆ. ಜಿಲ್ಲಾಡಳಿತ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರೂ ಕೂಡ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಮತದಾನ ಕಡಿಮೆಯಾಗಿದೆ.
ರಾಜ್ಯದ ಭವಿಷ್ಯ ಮತ್ತು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಕುಳಿತಿದೆ. ಈ ಮತಪೆಟ್ಟಿಗೆಗಳನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲೆಯ ಏಳೂ ತಾಲೂಕುಗಳ ಮತಪೆಟ್ಟಿಗೆಗಳು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿದ್ದು, ಅರೆಸೇನಾಪಡೆ ಮತ್ತು ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಮೇ 13ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಂದು ಮಧ್ಯಾಹ್ನದ ವೇಳೆಗೆ ಬಹುತೇಕ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬೀಳುವ ಸಾಧ್ಯತೆ ಇದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















