ಜಿಲ್ಲಾ ನೊಂದಣಾಧಿಕಾರಿ ಬಿ ಎಂ. ಗಿರೀಶ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಮುಖ್ಯವಾಗಿ ಸಾರ್ವಜನಿಕರು ತಮ್ಮ ಆಸ್ತಿಗಳನ್ನು ನೊಂದಣಿ ಮಾಡಿಸಿಕೊಳ್ಳಲು ಈ ತಂತ್ರಾಂಶ ಜನಸ್ನೇಹಿಯಾಗಿದೆ. ಮತ್ತು ಈ ತಂತ್ರಾಂಶದ ಮೂಲಕ ಅತ್ಯಂತ ಸರಳವಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೊಂದಣಿ ಮಾಡಿಸಿಕೊಳ್ಳಬಹುದು. ಈ ಯೋಜನೆ ಮೂಲಕ ಸಾರ್ವಜನಿಕರು ತಮ್ಮ ಆಸ್ತಿ ಮತ್ತಿತರ ನೊಂದಣಿಯನ್ನು ನೇರವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಾಡಿಕೊಳ್ಳಬಹುದು ಎಂದರು.
ನೊಂದಣಿಗೆ ಸಂಬಂಧಿಸಿದಂತೆ ಈ ಹಿಂದೆ ಕಾವೇರಿ-1 ತಂತ್ರಾಂಶ ಜಾರಿಗೆ ಬಂದಿತ್ತು. ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಈಗ ಕಾವೇರಿ-2 ತಂತ್ರಾಂಶ ಜಾರಿಗೆ ತರಲಾಗಿದೆ. ಇಡೀ ಜಿಲ್ಲೆಯಲ್ಲಿ ಇದು ಮೇ 15ರಿಂದ ಮೇ 22ರವರೆಗೆ ವಿವಿಧ ತಾಲೂಕುಗಳಲ್ಲಿ ಜಾರಿಗೆ ಬರಲಿದೆ ಎಂದರು.
ತರಬೇತುದಾರ ಚೇತನ್ ಪ್ರಾತ್ಯಕ್ಷತೆ ಮೂಲಕ ಮಾತನಾಡಿ, ನೊಂದಣಿಗೆ ಸಂಬಂಧಿಸಿದಂತೆ ಕಾವೇರಿ-2 ತಂತ್ರಾಂಶ ಅತ್ಯಂತ ಜನಸ್ನೇಹಿ ಆಗಲಿದೆ. ಪಾರದರ್ಶಕತೆ ಇದರಿಂದ ಬರುತ್ತದೆ. ಈ ಮೊದಲು ನೊಂದಣಿ ಮಾಡಿಸಿಕೊಳ್ಳಲು ಸಾರ್ವಜನಿಕರು ನೊಂದಣಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದು ಈಗ ತಪ್ಪುತ್ತದೆ.ಸಮಯ ಕೂಡ ಉಳಿತಾಯವಾಗುತ್ತದೆ. ಜೊತೆಗೆ ನೊಂದಣಿ ಹೆಚ್ಚಾಗುವುದರಿಂದ ಸರ್ಕಾರಕ್ಕೆ ಆದಾಯ ಕೂಡ ಹೆಚ್ಚುತ್ತದೆ ಎಂದರು.
ಸಾರ್ವಜನಿಕರಿಗೆ ನೊಂದಣಿಯಲ್ಲಿ ಕಾಯುವ ಪ್ರಮೇಯ ಇನ್ನಿರುವುದಿಲ್ಲ. ನೊಂದಣಿಗೆ ಮೊದಲೇ ತಮ್ಮ ದಾಖಲೆ ಅಪ್ಲೋಡ್ ಮಾಡಬಹುದು. ಈಗಾಗಲೇ ಕಂಪ್ಯೂಟರ್ ಆಪರೇಟರ್ಗಳಿಗೆ ಹೊಸ ತಂತ್ರಾಂಶದ ಬಗ್ಗೆ ತರಬೇತಿ ನೀಡಲಾಗಿದೆ. ಇದು ನೋಂದಣಿಗಾಗಿ ನಾಗರಿಕರ ಕಾಯುವ ಸಮಯವನ್ನು ತಪ್ಪಿಸುತ್ತದೆ. ಹೆಚ್ಚುವರಿಯಾಗಿ, ಡಾಕ್ಯುಮೆಂಟ್ ನೊಂದಣಿಗೆ ತೆಗೆದುಕೊಳ್ಳುವ ಸರಾಸರಿ ಸಮಯವು 15 ನಿಮಿಷಗಳಿಂದ 10 ನಿಮಿಷಗಳಿಗೆ ಕಡಿಮೆಯಾಗುತ್ತದೆ ಎಂದರು.
ಒಟ್ಟಾರೆ ನೊಂದಣಿಗಳಲ್ಲಿ ತಪ್ಪುಗಳು ಆಗುವುದು ಕಡಿಮೆಯಾಗುತ್ತದೆ. ಸರ್ವರ್ ತೊಂದರೆ ಇರುವುದಿಲ್ಲ. ಸಮಯದ ಉಳಿತಾಯ ಆಗುತ್ತದೆ. ನಕಲು ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಈ ತಂತ್ರಾಂಶ ಮತ್ತಷ್ಟು ಸುಧಾರಣೆ ಆಗುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮೇ 15, ಹೊಸನಗರ ಮೇ 16, ಸಾಗರ ಮೇ 17, ಶಿಕಾರಿಪುರ ಮೇ 18, ಶಿವಮೊಗ್ಗದಲ್ಲಿ 19,ಸೊರಬದಲ್ಲಿ 20, ತೀರ್ಥಹಳ್ಳಿಯಲ್ಲಿ 22ರಂದು ಅನುಷ್ಠಾನಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಮತ್ತ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ತೆರೆಯಲಾಗಿದೆ. ಸಾರ್ವಜನಿಕರು 080-68265316 ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಅಧಿಕಾರಿಗಳಾದ ಧನರಾಜ್, ಡಿ.ಎಸ್.ರವಿ, ಬಸವರಾಜ್ ವಿವೇಕ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 







Discussion about this post