ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನರ ಪ್ರೀತಿಗೆ ಋಣಿಯಾಗಿದ್ದೇನೆ. ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಜೇತ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್‍ಯಾ ನಾಯ್ಕ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಜನರು ನನ್ನನ್ನು 15000ಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ಅವರ ಪ್ರೀತಿಗೆ, ಅಭಿಮಾನಕ್ಕೆ ನನಗೆ ಹೃದಯ ತುಂಬಿ ಬಂದಿದೆ. ಶಾಸಕಿಯಾಗಿ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸುತ್ತೇನೆ. ಜನರು ಒಳ್ಳಯದಕ್ಕೆ ಸ್ಪಂದಿಸುತ್ತಾರೆ ಎನ್ನುವುದಕ್ಕೆ ನನ್ನ ಗೆಲುವೇ ಸಾಕ್ಷಿ. ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.
ಈ ಹಿಂದೆ ನಾನು ಶಾಸಕಿಯಾಗಿದ್ದಾಗ ಹಲವು ಅಭಿವೃದ್ಧಿಗಳನ್ನು ಮಾಡಿದ್ದೇನೆ. ಪ್ರಚಾರಕ್ಕೆ ಹೋದಾಗ ಹಲವು ಸಮಸ್ಯೆಗಳು ನನಗೆ ಗೋಚರಿಸಿವೆ. ಪ್ರಮುಖವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈಗಾಗಲೇ ಒಂದೆರಡು ಹಳ್ಳಿಗಳಲ್ಲಿ ಕೊಳವೆ ಬಾವಿ ತೆಗೆಸಿ ನೀರಿನ ವ್ಯವಸ್ಥೆ ಮಾಡಿದ್ದೇನೆ. ಜೊತೆಗೆ ಸಂಪರ್ಕ ರಸ್ತೆಗಳು ಇನ್ನೂ ಆಗಬೇಕಾಗಿದೆ. ಹಾಗೆಯೇ ಅನೇಕ ಹಳ್ಳಿಗಳಲ್ಲಿ ಸ್ಮಶಾನದ ಜಾಗವಿಲ್ಲ. ಮುಸಲ್ಮಾನರು ಹೆಚ್ಚಿರುವ ಒಂದೆರಡು ಕಡೆ ಶವ ಹೂಳಲು ಅವರಿಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಗಮನಹರಿಸುತ್ತೇನೆ ಎಂದರು.
ಹಳ್ಳಿಗಳಲ್ಲಿ ದೇವಸ್ಥಾನಗಳ ಬಗ್ಗೆ ಹೆಚ್ಚು ಒಲವಿದೆ. ಅನೇಕ ಹಳ್ಳಿಗಳಲ್ಲಿ ದೇವಸ್ಥಾನಗಳ ಪುನರುಜ್ಜೀವನಗೊಳೀಸಬೇಕಾಗಿದೆ. ಕೆಲವು ಕಡೆಗಳಲ್ಲಿ ದೇವಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆಯೂ ಗಮನಹರಿಸುವೆ. ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಈಗಿರುವ ಹೋಬಳಿ ಮಟ್ಟದ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಏರಿಸಬೇಕಾಗಿದೆ. ಜೊತೆಗೆ ಪ್ರಾಥಮಿಕ ಶಾಲೆಗಳನ್ನುಉಳಿಸಬೇಕಾಗಿದೆ. ಮತ್ತಷ್ಟು ಅಂಗನವಾಡಿ ಶಾಲೆಗಳನ್ನು ತೆರೆಯಬೇಕಾಗಿದೆ. ಹೀಗೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು,ರಸ್ತೆ, ದೇವಾಲಯ ಈ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮತ್ತಷ್ಟು ಆಗಬೇಕಾಗಿದೆ ಎಂದರು.
ಇನ್ನುಳಿದಂತೆ ಬಗರ್‌ಹುಕುಂ ಸಾಗುವಳಿ ಸಮಸ್ಯೆ, ಶರಾವತಿ ಸಂತ್ರಸ್ತರ ಸಮಸ್ಯೆ, ಕಿರುನೀರಾವರಿ ಯೋಜನೆಗಳು, ರಾಜ್ಯ ಹೆದ್ದಾರಿ, ಮುಂತಾದ ರಾಜ್ಯಮಟ್ಟದ ಸಮಸ್ಯೆಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಆಡಳಿತ ಪಕ್ಷದೊಂದಿಗೆ ಸಂಪರ್ಕ ಇಟ್ಟುಕೊಂಡು ಪ್ರೀತಿಯಿಂದಲೇ ಅನುದಾನಗಳನ್ನು ತಂದು ಸದನದಲ್ಲಿ ಮುಖ್ಯವಾದ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆ ಎಂದರು.
ನನ್ನ ಈ ಎಲ್ಲಾ ಬೆಳವಣಿಗೆಯಹಿಂದೆ ನನ್ನ ಪತಿ ಪೂರ್‍ಯಾನಾಯ್ಕ ಅವರ ಆಶೀರ್ವಾದವಿದೆ. ಅವರ ಆದರ್ಶಗಳು ನನಗೆ ಮಾದರಿಯಾಗಿವೆ. ಕ್ಷೇತ್ರದಲ್ಲಿ ಈಗಲೂ ಕೂಡ ಅವರನ್ನು ಸ್ಮರಿಸುತ್ತಾರೆ. ಜೊತೆಗೆ ಎಲ್ಲಾ ಜಾತಿಯ, ಎಲ್ಲಾ ಧರ್ಮದ, ಎಲ್ಲಾ ವರ್ಗದ ಕಾರ್ಯಕರ್ತರು ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದರು.
ಜೆಡಿಎಸ್ ಕಾರ್ಯಕರ್ತರು ರೌಡಿಸಂ ಮಾಡಿದ್ದಾರೆ ಎಂಬ ದೂರನ್ನು ನಿಮ್ಮ ಬಗ್ಗೆ ಬಿಜೆಪಿ ಅಭ್ಯರ್ಥಿ ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಅಭ್ಯರ್ಥಿ ಸೋಲಿನ ಹತಾಶೆಯಿಂದ ಹೀಗೆ ಹೇಳುತ್ತಿದ್ದಾರೆ. ಆನವೇರಿಯ ರ್‍ಯಾಲಿಗೆ ಸಂಬಂಧಿಸಿದಂತೆ ಅವರೇ ಕ್ಯಾತೆ ತೆಗದಿದ್ದು ಎಂದರು.
ಹಾಗೆಯೇ ಜೆಡಿಎಸ್-ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಅವರ ಆರೋಪ ಸರಿಯಲ್ಲ. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ನನಗೇನೂ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ತಮ್ಮದೇ ಆದ ಸಿದ್ಧಾಂತಗಳು ಇರುತ್ತವೆ. ಅವರು ಚುನಾವಣೆಗೆ ನಿಲ್ಲುವುದು ಹೊಂದಾಣಿಕೆ ಆಗಲಾರದು. ಬಿಜೆಪಿಯ ಸೋಲಿಗೆ ಕಾರಣ ಏನು ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಆ ಬಗ್ಗೆ ನಾನೇನೂ ಹೇಳುವುದಿಲ್ಲ. ಯಾರ ಬಗ್ಗೆಯೂ ಯಾವ ಆರೋಪಗಳನ್ನೂನಾನು ಹೊರಿಸಲಾರೆ. ಜನ ನನ್ನನ್ನು ಗೆಲ್ಲಿಸಿದ್ದಾರೆ ಅಷ್ಟೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕಾರ್‍ಯಾಧ್ಯಕ್ಷ ಕಾಂತರಾಜ್, ಪ್ರಮುಖರಾದ ಹೆಚ್.ಆರ್. ಹನುಮಂತಪ್ಪ , ಸತೀಶ್ ಕಸೆಟ್ಟಿ, ದಾದಾಪಿರ್, ಗೀತಾ ಸತೀಶ್, ರೇಣುಕಾ, ಕುಮಾರ್ ನಾಯ್ಕ, ರಮೇಶ್, ಪರಶುರಾಮ್ ಯೋಗೀಶ್, ನಾಗರಾಜ್, ಸಿದ್ಲಿಪುರ ಸತೀಶ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post