ಕಲ್ಪ ಮೀಡಿಯಾ ಹೌಸ್ | ಹಾಸನ |
ದುಷ್ಕರ್ಮಿಗಳು ಸಬ್‌ಇನ್ಸ್‌ಪೆಕ್ಟರ್ ಮನೆಗೇ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ.
ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಅವರ ಮನೆಯ ಕಿಟಕಿ ಒಡೆದು ಸೀಮೆಎಣ್ಣೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಶೋಭಾ ರಜೆ ಮುಗಿಸಿ ಶುಕ್ರವಾರ ಮನೆಗೆ ವಾಪಸಾದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಡಿವೈಎಸ್‌ಪಿ ಮುರುಳೀಧರ್ ಹಾಗೂ ವೃತ್ತ ನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶೋಭಾ ಭರಮಕ್ಕನವರ್ ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಘಟನೆ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















