ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಲು ಹಾಗೂ ಕನ್ನಡ ನಾಡು-ನುಡಿ-ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.
ಅವರು ಇಂದು ಕನ್ನಡ ಭವನದಲ್ಲಿರುವ ಅಂತರಂಗ ಸಭಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ವ್ಯಾಪ್ತಿಗೆ ಬರುವ ಇಲಾಖೆಗಳ ಮುಖ್ಯಸ್ಥರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಇಲಾಖೆ ಹಾಗೂ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ವಿಧಾನಮಂಡಲದಲ್ಲಿ ಅನುಮೋದನೆಗೊಂಡ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸುವ ಕೆಲಸಕ್ಕೆ ವೇಗ ನೀಡಬೇಕೆಂದು ಸೂಚಿಸಿದರು.

ಖಾಸಗೀ ಸಂಸ್ಥೆಗಳಲ್ಲಿ ಹಾಗೂ ಖಾಸಗೀ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸುವುದರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಮತ್ತು ಇಲಾಖೆಗಳು ಪರಿಶೀಲನೆ ನಡೆಸಬೇಕು. ಕನ್ನಡಿಗರಿಗೆ ಉದ್ಯೋಗವಕಾಶವನ್ನು ದೊರಕಿಸಬೇಕಾದ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಚ್ಚು ಶ್ರಮ ವಹಿಸಬೇಕು. ಅದಕ್ಕೆ ಸರ್ಕಾರದಿಂದ ಬೇಕಾದ ಕಾನೂನಾತ್ಮಕ ನೆರವನ್ನು ಒದಗಿಸಲು ಶೀಘ್ರದಲ್ಲಿ ಸಂಬಂಧಪಟ್ಟವರ ಸಭೆ ಕರೆಯಲಾಗುವುದೆಂದು ಹೇಳಿದರು.

Also read: ಮಾಧ್ಯಮದವರ ಸಮಸ್ಯೆಗಳಿಗೆ ಸ್ಪಂದಿಸುವುದು ತಮ್ಮ ಜವಾಬ್ಧಾರಿ: ಕೆ.ವಿ. ಪ್ರಭಾಕರ್ ಭರವಸೆ
ಹಾರ ತುರಾಯಿ ಬದಲು ಪುಸ್ತಕ ನೀಡಿ ತಮ್ಮನ್ನು ಭೇಟಿ ಮಾಡಲು ಬರುವ ಯಾರೇ ಆದರೂ ಹಾರ ತುರಾಯಿ, ಶಾಲು, ಪೇಟ ಇತ್ಯಾದಿಗಳಿಂದ ಸನ್ಮಾನ ಮಾಡುವುದನ್ನು ನಾನು ಬಯಸುವುದಿಲ್ಲ .ಅದರ ಬದಲಾಗಿ ಒಂದು ಒಳ್ಳೆಯ ಸಾಹಿತ್ಯ ಕೃತಿಯನ್ನು ಕೊಟ್ಟರೆ ಅದು ನನಗೆ ನೀಡಬಹುದಾದ ಉತ್ತಮ ಕೊಡುಗೆಯಾಗುತ್ತದೆ . ಇದರಿಂದ ಪುಸ್ತಕ ಪ್ರಕಾಶಕರಿಗೆ, ಮಾರಾಟಗಾರರಿಗೆ ಹಾಗೂ ಸಾಹಿತಿಗಳಿಗೆ ನೆರವಾಗುವುದಲ್ಲದೆ ಪುಸ್ತಕಕೋದ್ಯಮದ ಬೆಳವಣಿಗೆಗೂ ಅನುಕೂಲವಾಗುತ್ತದೆ. ಈ ರೀತಿ ನನಗೆ ನೀಡಲಾಗುವ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ ಓದುವ ಆಸಕ್ತಿ ಉಳ್ಳ ಮಕ್ಕಳಿಗೆ ಅದನ್ನು ನೀಡಲು ಬಯಸುತ್ತೇನೆ .ಅಥವಾ ಆಸಕ್ತ ಶಾಲಾ, ಕಾಲೇಜಿನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುತ್ತೇನೆ ಎಂದು ಸಚಿವರು ಹೇಳಿದರು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post