ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದು ನಸುಕಿನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿರೂಪಾಕ್ಷ ಪುರ ಹೋಬಳಿ ವಿರೂಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರ (40) ಮತ್ತು ಮೊನ್ನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮಳೆಯೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ರೈತ ರವಿ (40) ಎಂಬುವರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ Minister Eshwar Khandre ಸಂತಾಪ ಸೂಚಿಸಿದ್ದಾರೆ.
ಯಾವುದೇ ವ್ಯಕ್ತಿ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು. ಇನ್ನು ಮುಂದೆ ಪ್ರಾಣಿಗಳ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವ ಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ತಕ್ಷಣವೇ ಎಲ್ಲಿ ಹೆಚ್ಚಿನ ಆನೆಗಳ ದಾಳಿ ಪ್ರದೇಶವಿದೆಯೋ ಅಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ಇಂತಹ ಅನಾಹುತಗಳನ್ನು ತಪ್ಪಿಸುವುದು ಅಗತ್ಯವಾಗಿದೆ. ಇದಕ್ಕೆ ಮುಂಬರುವ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೃತರಿಬ್ಬರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಒಡಿಶಾ ರೈಲು ದುರಂತದಲ್ಲಿ 200ಕ್ಕೂ ಹೆಚ್ಚು ಮುಗ್ಧ ಪ್ರಯಾಣಿಕರು ಮತ್ತು ರಾಜ್ಯದಲ್ಲಿ 3 ದಿನಗಳ ಅಂತರದಲ್ಲಿ ಇಬ್ಬರು ಆನೆ ತುಳಿತದಿಂದ ಸಾವಿಗೀಡಾಗಿರುವ ಬಗ್ಗೆ ದುಃಖ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವರಾದ ರಹೀಮ್ ಖಾನ್ ಅವರು ಬೀದರ್ ನಲ್ಲಿ ಆಯೋಜಿಸಲಾಗಿದ್ದ ತಮ್ಮ ಅಭಿನಂದನಾ ಸಮಾರಂಭವನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ.
ದೇಶದ ನೂರಾರು ಕುಟುಂಬಗಳು ರೈಲು ದುರಂತದಿಂದಾಗಿ ದುಃಖದ ಮಡುವಿನಲ್ಲಿ ಮುಳುಗಿರುವಾಗ ಸನ್ಮಾನ ಸ್ವೀಕರಿಸಲು ತಮ್ಮ ಮನಸ್ಸು ಒಪ್ಪುತ್ತಿಲ್ಲ ಹೀಗಾಗಿ ಅಭಿನಂದನಾ ಸಮಾರಂಭ ಮುಂದೂಡುವಂತೆ ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಮನವಿ ಮಾಡಿರುವುದಾಗಿ ಇಬ್ಬರೂ ಸಚಿವರು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಆಪ್ತರ ನೋವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post