ಕಲ್ಪ ಮೀಡಿಯಾ ಹೌಸ್ | ಸೊರಬ |
ಪುರಸಭೆ ವ್ಯಾಪ್ತಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಬೇಲಿ ನಿರ್ಮಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್-ಬಜರಂಗ ದಳದ ವತಿಯಿಂದ ಪಟ್ಟಣದ ಮೆಸ್ಕಾಂ ಕಚೇರಿಗೆ ತೆರಳಿ ಮೆಸ್ಕಾಂ MESCOM ಎಇಇ ಎಸ್. ಸತ್ಯಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಕೆಯ ನೇತೃತ್ವ ವಹಿಸಿದ್ದ ವಿಹಿಂಪ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಬೇಲಿ ಇಲ್ಲದೆ, ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ. ಮರೂರು ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸ್ಪರ್ಶಿಸಿ ಸುಮಾರು ಒಂದು ಲಕ್ಷ ಮೌಲ್ಯದ ಸೀಮೆ ಹಸುವೊಂದು ಭಾನುವಾರ ಮೃತ ಪಟ್ಟಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷವೂ ಸಹ ಬಿಡಾಡಿ ದನವೊಂದು ಮೃತಪಟ್ಟಿತ್ತು. ಈ ಬಗ್ಗೆ ಮೌಖಿಕವಾಗಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅನೇಕ ಅನಾಹುತಗಳಿಗೆ ಕಾರಣವಾಗುತ್ತಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುತ್ತ ಬೇಲಿ ನಿರ್ಮಿಸುವ ತುರ್ತು ಅಗತ್ಯವಿದೆ ಎಂದರು.
ಮರೂರು ರಸ್ತೆಯ ಟ್ರಾನ್ಸ್‌ಫಾರ್ಮರ್ ಬಳಿ ಶಾಲೆ ಇದ್ದು, ನಿತ್ಯ ಸಾವಿರಾರು ಜನ ಇದೇ ಮಾರ್ಗವಾಗಿ ಸಂಚರಿಸುತ್ತಿರುತ್ತಾರೆ. ಮಕ್ಕಳು ಇಲ್ಲೇ ಸುತ್ತ ಮುತ್ತ ಆಟವಾಡುತ್ತಿರುತ್ತಾರೆ. ಮಕ್ಕಳು ಆಟವಾಡುವ ವೇಳೆಯಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದೇ ಮಾದರಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಟ್ರಾನ್ಸ್‌ಫಾರ್ಮರ್‌ಗಳಿವೆ. ಅವುಗಳ ಸುತ್ತ ಬೇಲಿ ನಿರ್ಮಿಸಬೇಕು. ಹಾಗೂ ಮರೂರು ರಸ್ತೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತ ಪಟ್ಟಿರುವ ಹಸುವಿನ ಮಾಲಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಹಾಗೂ ಪಪಂ ಮುಖ್ಯಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗ ದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಪ್ರಮುಖರಾದ ರವಿ ಗುಡಿಗಾರ್, ನಾಗರಾಜ್ ಆಚಾರ್ ಅಂಬಾರಿ, ಹರೀಶ್, ನಾಗರಾಜ ಗೌಳಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















