ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬುದ್ಧಿಯ ಮಿತಿಗಳನ್ನು ವಿಸ್ತರಿಸಿಕೊಂಡು ಜೀವನದಲ್ಲಿ ನೆಮ್ಮದಿಯಿಂದ ಬಾಳಲು ಶ್ರೀಮದ್ ಭಾಗವತ #Bhagavata ಗ್ರಂಥ ಸಹಕಾರಿಯಾಗಿದೆ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.
ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದಲ್ಲಿ #UttaradiMutt ಅಧಿಕ ಶ್ರಾವಣ ಅಂಗವಾಗಿ ಆಯೋಜಿಸಿರುವ `ಭಾಗವತ- ಒಂದು ತಿಂಗಳ ಸರಣಿ ಉಪನ್ಯಾಸ ಮಾಲಿಕೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಅಧಿಕ ಮಾಸದಲ್ಲಿ #AdikaMasa ಧರ್ಮ ಕಾರ್ಯಗಳಿಗೆ ಸಾವಿರ ಪಟ್ಟು ಪುಣ್ಯ ಲಭ್ಯವಿದೆ. ಭಾಗವತ ಶ್ರವಣದ ಬಗ್ಗೆ ಶ್ರದ್ಧೆ, ಪರಮಾತ್ಮನ ಕಥೆಗಳ ಬಗ್ಗೆ ಅನನ್ಯ ಭಕ್ತಿ, ಅಚಲ ವಿಶ್ವಾಸ ರೂಢಿಸಿಕೊಂಡವರಿಗೆ ಸರ್ವತ್ರವೂ ವಿಜಯವೇ ಲಭಿಸುತ್ತದೆ ಎಂದರು.

ದೇವರು ಅತ್ಯಂತ ಕರುಣಾಮಯಿ. ನಾವು ಸ್ಮರಣೆ ಮಾಡದಿದ್ದರೂ, ಆರಾಧಿಸದಿದ್ದರೂ ನಮ್ಮನ್ನು ಜೋಪಾನವಾಗಿ ರಕ್ಷಣೆ ಮಾಡುತ್ತಾನೆ. ನಮಗೆ ಉತ್ತಮವಾದ ಅಂಗಾಂಗಗಳನನ್ನು ನೀಡಿದ್ದಾನೆ. ಸುಂದರವಾದ ವಿಶ್ವವನ್ನು ನೋಡುವ ಪುಣ್ಯ ಕೊಟ್ಟಿದ್ದಾನೆ. ಹಾಗಾಗಿ ಆತ ದೋಶಗಳೇ ಇಲ್ಲದ ಸರ್ವೋತ್ತಮ. ಇಂಥ ಪರಮಾತ್ಮನ ಲೀಲೆಗಳನ್ನು ಕೃತಿಯಾಗಿ ರಚಿಸಿದ ಭಗವಾನ್ ವೇದವ್ಯಾಸರೂ ನೈಜ, ಸತ್ಯ ಪ್ರಸಂಗಗಳನ್ನು ದರ್ಶನ ಮಾಡಿದವರೇ ಆಗಿದ್ದಾರೆ. ಹಾಗಿರುವಾಗ ಅಧಿಕ ಮಾಸದಲ್ಲಿ ಒಂದು ತಿಂಗಳು ನಿತ್ಯವೂ ಮುಂಜಾನೆ ಭಾಗವತ ಶ್ರವಣ ಮಾಡುವ ಯೋಗ, ಜ್ಞಾನಿಗಳ ಮಾತುಗಳನ್ನು ಕೇಳುವ ಭಾಗ್ಯ ನಮ್ಮದಾಗಿರುವುದು ಸುಕೃತ ಎಂದರು.
ಪ್ರಾತಸ್ಮರಣೀಯರಾದ ಶ್ರೀ ವಿಜಯಧ್ವಜ ತೀರ್ಥರು, ಯಾದವಾರ್ಯರು ಭಾಗವತದ ಮಹತ್ವ ಸಾರಿದ್ದಾರೆ. ಆಚಾರ್ಯ ಮಧ್ವರು ತಾತ್ಪರ್ಯ ನಿರ್ಣಯ ಗ್ರಂಥದಲ್ಲಿ ನಾವು ಭಾಗವತವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಸಮಗ್ರವಾಗಿ ತಿಳಿಸಿದ್ದಾರೆ. ಇಷ್ಟು ಸರಳ ಮಾರ್ಗಗಳು ನಮ್ಮೆದುರು ಇರುವಾಗ ಅಧರ್ಮ, ಅನಾಚಾರ ಹೆಚ್ಚಾಗಿದೆ. ಪ್ರಪಂಚ ಕೆಟ್ಟುಹೋಗಿದೆ ಎಂದು ಚಿಂತೆ ಮಾಡುತ್ತಾ ಕೂರುವುದು ಸಲ್ಲ. ಭಾಗವತ ಇವೆಲ್ಲವಕ್ಕೂ ಅನೇಕ ಪರಿಹಾರ ಸೂತ್ರಗಳನ್ನು ನೀಡಿದೆ. ಅನಂತ ಜನ್ಮಗಳ ಪುಣ್ಯದಿಂದ ನಮಗೆ ಶ್ರೇಷ್ಠ ಮಾನವ ಜನ್ಮ ದೊರಕಿದೆ. ಗುರುಗಳ ಸಾಮೀಪ್ಯ ಲಭ್ಯವಾಗಿದೆ. ಹೀಗಿರುವಾಗ ಮಹಾನ್ ಗ್ರಂಥಗಳನ್ನು ಅವಲೋಕಿಸಿ ಆನಂದವನ್ನು ಕಂಡುಕೊಳ್ಳೋಣ ಎಂದು ಅನಿರುದ್ಧಾಚಾರ್ಯ ಹೇಳಿದರು.

ಪಲ್ಲಕ್ಕಿ ಉತ್ಸವ
ಉಪನ್ಯಾಸಕ್ಕೂ ಮುನ್ನ ಶ್ರೀಮದ್ ಭಾಗವತ, ತಾತ್ಪರ್ಯ ನಿರ್ಣಯ, ಸರ್ವಮೂಲ ಮೊದಲಾದ ಶ್ರೀ ಆಚಾರ್ಯ ಮಧ್ವರ ಗ್ರಂಥಗಳ ಪಲ್ಲಕ್ಕಿ ಉತ್ಸವ ನೆರವೇರಿತು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ಅಧಿಕ ಶ್ರಾವಣ ಮಾಸದ #ShranaMasa ಪ್ರತಿದಿನವೂ ಬೆಳಗ್ಗೆ 7.30ರಿಂದ 8.30ರ ವರೆಗೆ ಶ್ರೀಮಠದಲ್ಲಿ ವಿದ್ವಾಂಸರಿಂದ ಭಾಗವತ ಪ್ರವಚನ ಆಯೋಜನೆಗೊಂಡಿದ್ದು, ಭಕ್ತರು ಭಾಗವಹಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post