ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಹೋಬಳಿ ಕೋಡಂಬಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಳು ಮತ್ತು ಬಿಳಿಗಲ್ಲು, ಜಂಬಿಟ್ಟಿಗೆಯ ಅನಧಿಕೃತ ಕ್ವಾರೆಗಳು ಸಕ್ರಿಯವಾಗಿವೆ. ಕೋಡಂಬಿ ಸನಂ 7, 22, 24, 36, 47 ಭೂಮಿ ಗಣಿಗಾರಿಕೆಗೆ ಸೀಮಿತವಾಗಿರುವ ಬಗ್ಗೆ ಮಾಹಿತಿ ಇದೆ. ಅಲ್ಲೇ ಸಮೀಪದ ಮಾವಿನಬಳ್ಳಿಕೊಪ್ಪದಲ್ಲೂ ಅಡೆತಡೆ ಇಲ್ಲದೆ ಮರಳು, ಬಿಳಿಕಲ್ಲು ಕ್ವಾರೆ ಜಾಗೃತ ವಾಗಿದೆ.
ಚಂದ್ರಗುತ್ತಿ, ಜಡೆ ಹೋಬಳಿ ವರದಾ ನದಿ ತೀರದ ಅನೇಕ ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಕಾನಗೋಡು ಮುಂತಾದ ಕಡೆ ಮರಳು ದಂದೆ ವ್ಯಾಪಕವಾಗಿ ಹರಡಿದೆ. ಚಂದ್ರಗುತ್ತಿ ಸಮೀಪದ ಕತವಾಯಿ ಭಾಗದಲ್ಲಿ ಈ ದಂದೆಗಾಗಿ ಒಂದು ಕೆರೆಯೆ ನಾಶವಾಗಿರುವ ಬಗ್ಗೆ ಗ್ರಾಮದ ಕೆಲವರು ಹೇಳಿದ್ದಾರೆ.
ಈಚೆಗೆ ಜಡೆ ಭಾಗದಲ್ಲಿ ಅನಧಿಕೃತ ಮರಳು ಸಂಗ್ರಹಣೆಯಿಂದ ವೈಯುಕ್ತಿಕ, ಸಾರ್ವಜನಿಕವಾಗಿ ತೊಂದರೆ ಆಗುತ್ತಿರುವುದನ್ನು ಆಕ್ಷೇಪಿಸಿದ್ದಕ್ಕೆ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿದ್ದು ಕಾನೂನು ವ್ಯಾಪ್ತಿಯಲ್ಲಿದೆ.
ಚಂದ್ರಗುತ್ತಿ ಕಾನುಗೋಡು ಭಾಗದಲ್ಲಿ ಹಳ್ಳದ ದಿಕ್ಕನ್ನೇ ಬದಲಿಸಿ ಕೃಷಿ ಭೂಮಿಯ ಮೇಲೆ ನೀರು ಹರಿಸಿ ಮರಳು ಸಂಗ್ರಹಿಸುವ ಮೂಲಕ ಕೃಷಿ ಪ್ರದೇಶಗಳಿಗೆ ತೆರಳುವ ರೈತರಿಗೆ ಅಡಚಣೆ ಉಂಟಾಗಿದೆ.
Also read: ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ಎಲ್ಲ ಕೋರ್ಸ್’ಗಳಿಗೂ ಒಮ್ಮೆಗೇ ಸೀಟು ಹಂಚಿಕೆ
ತಾಲೂಕಿನ ನದಿ ತೀರದಲ್ಲಿ ಅಲ್ಲದೆ ಕೃಷಿ ಭೂಮಿಯಲ್ಲಿಯೂ ಮರಳು ತೆಗೆಯುವ ದಂದೆ ವ್ಯಾಪಕವಾಗಿ ವಿಸ್ತಾರಗೊಂಡಿದೆ. ಸಣ್ಣಪುಟ್ಟ ಹಳ್ಳ, ದಂಡಾವತಿ, ವರದಾ ನದಿ ಪ್ರದೇಶದ ಹಲವೆಡೆ ತರಿ ಜಮೀನಿನಲ್ಲಿ ನೀರು ಹಾಯಿಸಿ ಮರಳು ಸೋಸುವ ಮೂಲಕ ಆಹಾರ ಬೆಳೆಯುವ ಭೂಮಿ ಬರಡಾಗುತ್ತಿದೆ.
ಆಹಾರ ಬೆಳೆ ಬೆಳೆಯುವ ಶ್ರಮ ಖರ್ಚು ವೆಚ್ಚ ಗಿಂತಲೂ ಮರಳು ತೆಗೆಯುವ ಕೆಲಸವೆ ಲಾಭದಾಯಕ ಎಂದು ಮನಗಂಡ ಕೃಷಿಕರು ಇಂತಹ ವಿಶೇಷ ದಂದೆಗೆ ಮುಂದಾಗಿರುವುದು ವಾಸ್ತವ ಸಂಗತಿ. ಇಂತಲ್ಲಿ ಸರ್ಕಾರಿ ಭೂಮಿಗಳಾದ ಖರಾಬು, ಅರಣ್ಯ ಖರಾಬುಗಳನ್ನು ಅತಿಕ್ರಮಿಸಲಾಗಿದೆ.
ಇಂತಹ ಅನಧಿಕೃತ, ಅವೈಜ್ಞಾನಿಕ ಮರಳು ಸಂಗ್ರಹಣೆಯಿಂದಾಗಿ ನದಿ, ಹಳ್ಳ ಗಳಲ್ಲಿ ನೀರು ಸಂಗ್ರಹಣೆ ಕ್ಷೀಣಿಸಿದೆ. ಕೊಳವೆ, ತೆರೆದಬಾವಿ ನಿಷ್ಕ್ರಿಯವಾಗಿದೆ. ಕೃಷಿ ಯೋಗ್ಯ ಭೂಮಿ ಬರಡಾಗಿದೆ. ಚಂದ್ರಗುತ್ತಿ ಭಾಗದ ಕಾಯ್ದಿಟ್ಟ ಅರಣ್ಯಕ್ಕೆ, ನದಿ ಹಳ್ಳ ತೀರದ ವೃಕ್ಷ ಸಮೂಹಕ್ಕೆ ಧಕ್ಕೆ ಉಂಟಾಗುತ್ತದೆ. ಜೀವವೈವಿಧ್ಯ ಸಮತೋಲನಕ್ಕೆ, ಸಾಮಾಜಿಕ ಸಾಮರಸ್ಯಕ್ಕೆ ಅಡ್ಡಿಯುಂಟಾಗುತ್ತದೆ. ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು.
-ಸಿ.ಪಿ. ಈರೇಶಗೌಡ, ಪ್ರಧಾನ ಕಾರ್ಯದರ್ಶಿ, ಪರಿಸರ ಜಾಗೃತಿ ಟ್ರಸ್ಟ್ ಸೊರಬ
ಇನ್ನು ನದಿ ಬಗೆದು ಮರಳು ಸಂಗ್ರಹಿಸುವ ಅನಧಿಕೃತ ಮರಳು ಕ್ವಾರೆ ಗಳ ಸಂಖ್ಯೆ ಬೆರಳೆಣಿಕೆ ಇದ್ದುದ್ದು ಈಚೆಗೆ ಎಣಿಸಲಾರದಷ್ಟು ಸಂಖ್ಯೆಯಲ್ಲಿ ಕಾರ್ಯನಿರತವಾಗಿದೆ.
ಹರಿಹರದ ಮರಳು ಹಾಗೂ ಸ್ಥಳೀಯ ಹಳ್ಳಗಳ ಮರಳು ಸೇರಿಸಿ ಮಾರಾಟ ಮಾಡುವ ದಂದೆ ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಕ್ರಿಯಾಶೀಲವಾಗಿ ರುವ ಬಗ್ಗೆ ಮಾಹಿತಿ ದೊರೆತಿದೆ.
ಕೆಲವು ಗ್ರಾಮದವರು ಇದನ್ನೇ ಗ್ರಾಮಾದಾಯ ಮಾಡಿಕೊಂಡು ಗ್ರಾಮ ವ್ಯಾಪ್ತಿಯ ಒಳಗೆ ಹರಾಜು ಹಾಕಿ ಹಣ ಗಳಿಸಲು ಮುಂದಾಗಿರುವ, ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರುತ್ತಿದೆ.
ಈ ಅನಧಿಕೃತ ಪ್ರಕರಣಗಳನ್ನು ಎಲ್ಲಿಯೂ ಯಾರೂ ದೂರು ಅಥವಾ ಹೇಳಿಕೆ ಕೊಡಲಾರದಷ್ಟು ಮರಳು ದಂದೆ ಬಲಿಷ್ಟವಾಗಿದೆ. ಸಾಬೀತು ಪಡಿಸಲು ಹಲವು ತೊಡಕುಗಳು ಇದ್ದು ದಂದೆಯ ನಿಯಂತ್ರಣ ಕನಸಿನ ಮಾತೆಂಬಂತೆ ಆಗಿದೆ.
(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















