ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಸಚಿವ ತನ್ವೀರ್ ಸೇಠ್ ಅವರು ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಶಿವಮೊಗ್ಗ, ಹುಬ್ಬಳಿ ಗಲಾಟೆ ಪ್ರಕರಣ ವಾಪಸ್ ಪಡೆಯಲು ಪರಿಶೀಲನೆ ನಡೆಸಲು ಪತ್ರ ಬರೆದಿದ್ದಾರೆ. ಯಾವುದೆ ಕಾರಣಕ್ಕೂ ಈ ಪ್ರಕರಣಗಳನ್ನು ವಾಪಸ್ ಪಡೆಯಬಾರದು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ Araga Gnanendra ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಪತ್ರಕ್ಕ ಗೃಹ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಕೊಡಿ ಎಂದು ಹೇಳಿದ್ದಾರೆ. ಇದು ಕೂಡ ಸರಿಯಲ್ಲ ಎಂದರು.
ಡಿಜೆಹಳ್ಳಿ, ಕೆಜಿಹಳ್ಳಿ ಗಂಟೆಗಟ್ಟಲೆ ಹೊತ್ತಿ ಉರಿಯಿತು. ಪೋಲೀಸ್ ಸ್ಟೇಷನ್, ಶಾಸಕರ ಮನೆಗಳು ಹೊತ್ತಿ ಉರಿದವು. ಇವರನ್ನು ಅಮಾಯಕರು ಎನ್ನುತ್ತಿದ್ದಾರೆ. ಇವರನ್ನು ಅಮಾಯಕರು ಎನ್ನುವುದಾದರೆ ನಿಜವಾದ ಅಮಾಯಕರನ್ನು ಏನೆನ್ನಬೇಕು ಎಂದು ಪ್ರಶ್ನಿಸಿದರು.
Also read: ಕಾಂಗ್ರೆಸ್ ಪಕ್ಷದೊಳಗೆ ಬೇಗುದಿ ಆರಂಭ: ರಾಜ್ಯ ಸರ್ಕಾರದ ವಿರುದ್ಧ ಕೆಎಸ್‌ಈ ವಾಗ್ಧಾಳಿ
ಒಂದು ಸಮುದಾಯವನ್ನು ಓಲೈಕೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಒಂದು ಪಂಥವರಿಗೆ ಪ್ರೇರಣೆ ನೀಡುವ ಕೆಲಸ ಮಾಡಲಾಗುತ್ತಿದೆ. ಮೊನ್ನೆ ಐದು ಜನರನ್ನು ಬಂಧಿಸುವಾಗ ಓರ್ವ ಆರೋಪಿ ಕಾಂಗ್ರೆಸ್ ಸರ್ಕಾರ ಬಂದಿದೆ ಹುಷಾರ್ ಎಂದು ಪೊಲೀಸರಿಗೆ ಧಮಕಿ ಹಾಕಿದ್ದಾನೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದೆ ಶಾರಿಕ್ ಗೂ ಭಯೋತ್ಪಾದಕನಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಈಗ ಬಂಧಿತರಾಗಿರುವವರನ್ನು ಭಯೋತ್ಪಾದಕರು ಎಂದು ಈಗಲೇ ಹೇಳಲು ಆಗುವುದಿಲ್ಲ ಎನ್ನುತ್ತಾರೆ. ಗ್ರೆನೇಡ್, ವಾಕಿಟಾಕಿ ಇಟ್ಟುಕೊಂಡವರು ಇವರ ಬ್ರದರ್ಸಾ ಎಂದು ಆರಗ ಪಶ್ನಿಸಿದರು.
ಪೊಲೀಸರು ಸರ್ಕಾರದ ಒತ್ತಡಕ್ಕೆ ಮಣಿದು ಇಂಥವರಿಗೆ ಸಹಕಾರ ನೀಡಿ ತಲೆತಗ್ಗಿಸಬೇಕಾಗುತ್ತದೆ. ಉಡುಪಿ ಹಾಸ್ಟೆಲ್ ನಲ್ಲಿ ಮೂರ ಜನ ವಿದ್ಯಾರ್ಥಿನಿಯರು ಕ್ಯಾಮರಾ ಇಟ್ಟಿದ್ದರು. ವೀಡಿಯೊಗಳನ್ನು ಯಾರಿಗೆ ಕೊಟ್ಟಿದ್ದರು ಎಂಬ ಬಗ್ಗೆ ತನಿಖೆಯಾಗಬೇಕು. ಯಾರೂ ಈ ಬಗ್ಗೆ ದೂರು ಕೊಟ್ಟಿಲ್ಲ ಎಂದರೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವಿಡಿಯೋಗಳು ದುರ್ಬಳಕೆಯಾಗಿರುವ ಸಾಧ್ಯತೆಯಿದೆ. ಹೀಗಾಗಿ ಮೂವರು ವಿದ್ಯಾರ್ಥಿಗಳ ಫೋನ್ ವಶಕ್ಕೆ ಪಡೆದು ಎಫ್.ಎಸ್.ಎಲ್.ಗೆ ಕಳುಹಿಸಬೇಕು. ಕಾಲೇಜು ಪ್ರಾಚಾರ್ಯರೇ ಘಟನೆ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡುವುದು ಸಾಮಾನ್ಯ. ಅವರಿಗೆ ಕೃತಜ್ಞತಾ ಭಾವವಿದೆ. ಹೀಗಾಗಿ ಟ್ವೀಟ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು
ಮಂಗಳೂರಿನಲ್ಲಿ ಮೂವರು ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಲಾಗುತ್ತಿದೆ. ಹಿಂದುಗಳ ಮೇಲೆ ಮಾತ್ರ ಕೇಸ್ ಏಕೆ. ಇನ್ನೊಂದು ಕೋಮಿನವರ ಮೇಲೆಯೂ ಕೇಸು ದಾಖಲಿಸಬೇಕಿತ್ತು. ಕಾಂಗ್ರೆಸ್ಸಿಗರು ಈಗಾಗಲೇ ವರ್ಗಾವಣೆ ಅಂಗಡಿ ಓಪನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಪಕ್ಷದ ಶಾಸಕರೇ ಆರೋಪ ಮಾಡಲಾರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ನಾವು ಕೆಡವಬೇಕಿಲ್ಲ. ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿದರೇ ಕಾಂಗ್ರೆಸ್ಸಿಗರೇ ಕಾಂಗ್ರೆಸನ್ನು ಕೆಡವಲಿದ್ದಾರೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















